155 ದೇಶಗಳಿಂದ 38.8 ಲಕ್ಷ ಮಕ್ಕಳು ನೋಂದಣಿ
ಹೊಸದಿಲ್ಲಿ :ಪ್ರಧಾನಿ ನರೇಂದ್ರ ಮೋದಿಯವರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಇಂದು ನಡೆಯಲಿದೆ. 2023ರ ಬೋರ್ಡ್ ಪರೀಕ್ಷೆ ಬಗ್ಗೆ ಮೋದಿ ವಿದ್ಯಾರ್ಥಿಗಳೊಂದಿಗೆ ಮಾತನಾಡಲಿದ್ದಾರೆ ಮತ್ತು ಅವರಿಗೆ ಒತ್ತಡ-ಮುಕ್ತ ಮಂತ್ರಗಳನ್ನು ನೀಡಲಿದ್ದಾರೆ. ದಿಲ್ಲಿಯ ತಲ್‌ಕಟೋರ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪರಿಕ್ಷಾ ಪೇ ಚರ್ಚಾ 2023 ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ.
ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ ಈ ಬಾರಿ ಸುಮಾರು 38.8 ಲಕ್ಷ ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ 16 ಲಕ್ಷಕ್ಕೂ ಹೆಚ್ಚು ರಾಜ್ಯ ಮಂಡಳಿಗಳಿಂದ ಬಂದಿದ್ದು, 155 ದೇಶಗಳಿಂದ ನೋಂದಣಿ ಮಾಡಲಾಗಿದೆ.
ಕಳೆದ ವರ್ಷಕ್ಕಿಂತ ಈ ನೋಂದಣಿ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ ಕಾರ್ಯಕ್ರಮಕ್ಕೆ ಸುಮಾರು 15.3 ಲಕ್ಷ ನೋಂದಣಿಯಾಗಿತ್ತು. ಪರೀಕ್ಷಾ ಪೆ ಚರ್ಚಾ 2023ರ ನೋಂದಣಿ ಪ್ರಕ್ರಿಯೆ 25 ನವೆಂಬರ್ 2022 ರಿಂದ ಪ್ರಾರಂಭವಾಯಿತು ಮತ್ತು 30 ಡಿಸೆಂಬರ್ 2022ರಂದು ಕೊನೆಗೊಂಡಿತು.
ಪ್ರಧಾನಿ ನರೇಂದ್ರ ಮೋದಿ ಅವರು 2018 ರಲ್ಲಿ ಮೊದಲ ಬಾರಿಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಆರಂಭಿಸಿದರು. ಅಂದಿನಿಂದ ಈ ಕಾರ್ಯಕ್ರಮದ ಮೂಲಕ ಪ್ರಧಾನಿಯವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ನಿರಂತರವಾಗಿ ಸಂವಾದ ನಡೆಸುತ್ತಿದ್ದಾರೆ. ಕಾರ್ಯಕ್ರಮದ ಮೂಲಕ ಪಿಎಂ ನೇರವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸುತ್ತಾರೆ.