ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಯಕ್ಷ ಕಲಾಕೇಂದ್ರ, ಲಲಿತ ಕಲಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸ್ಪಂದನ ಸಭಾಭವನದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು ರಂಗಗೀತೆ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾಲೇಜಿನ ಉಪ ಪ್ರಾಂಶುಪಾಲ ಡಾ.ವಿಜಯಕುಮಾರ್ ಎಂ. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ರಂಗಭೂಮಿ ವಿಕಾಸ,ರಂಗ ಭೂಮಿಯ ಪ್ರಕಾರಗಳು ಮತ್ತು ರೂಪಗಳು, ರಂಗ ಭೂಮಿಯ ಯಶಸ್ಸಿನಲ್ಲಿ ನಾಟಕಕಾರರು, ನಿರ್ದೇಶಕರು, ನಟರು ಮತ್ತು ವಿನ್ಯಾಸಕರ ಪಾತ್ರ, ರಂಗಭೂಮಿ ಸಂಸ್ಕೃತಿಯು ತೋರಿಸುವ ಜೀವನ ಮೌಲ್ಯಗಳು, ಸಾಮಾಜಿಕ ಸಮಸ್ಯೆಗಳು, ಜನಸಾಮಾನ್ಯರ ಮೇಲೆ ರಂಗಭೂಮಿಯ ಪ್ರಭಾವ, ರಂಗಭೂಮಿ ಶಕ್ತಿಯುತ ಶೈಕ್ಷಣಿಕ ಸಾಧನವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ವಿಷಯಗಳ ಕುರಿತು ತಿಳಿಯಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ವಂ. ಡಾ.ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಡಿಜಿಟಲ್ ಮಾಧ್ಯಮಗಳ ಪ್ರಭಾವಕ್ಕೊಳಗಾದ ಜನತೆಯು ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಯ ಬಗ್ಗೆ ಹೆಚ್ಚಿನ ಒಲವು ತೋರಿಸಬೇಕಾದ ಅಗತ್ಯ ಇದೆ. ನಮ್ಮ ಬಾಲ್ಯದಲ್ಲಿ ನಾವು ನೋಡಿದ ನಾಟಕದ ಒಂದು ಪುಟ್ಟ ಪಾತ್ರ ಅಥವಾ ನಾವು ಎಂದೂ ಮರೆಯದೆ ಗುನುಗುತ್ತಿರುವ ಹಾಡಿನ ಸಾಲುಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರಬಲ್ಲವು. ರಂಗಭೂಮಿ ಕಲೆಯನ್ನು ಬೆಂಬಲಿಸುವುದು ಎಂದರೆ ನಮ್ಮ ಗ್ಯಾಜೆಟ್ಗಳನ್ನು ತ್ಯಜಿಸುವುದು ಎಂದಲ್ಲ. ಬದಲಿಗೆ ತಂತ್ರಜ್ಞಾನದ ಬಳಕೆಯಿಂದ ರಂಗಭೂಮಿಯನ್ನು ಬಲಪಡಿಸಬಹುದಾಗಿದೆ ಎಂದರು.
ಬಳಿಕ ಕಾಲೇಜಿನ ಲಲಿತ ಕಲಾ ಸಂಘದ ವಿದ್ಯಾರ್ಥಿಗಳಿಂದ ರಂಗಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಹೃಷಿತಾ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಯಕ್ಷಕಲಾ ಕೇಂದ್ರದ ಸಂಯೋಜಕ ಪ್ರಶಾಂತ್ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಯಕ್ಷಾಮೃತ ಕಾರ್ಯಕ್ರಮದ ಸಂಯೋಜಕ ಪುನೀತ್ ರಾಜ್ ವಂದಿಸಿದರು.
























