ಮಂಗಳೂರು: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಇಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ಮೊದಲು ಹಮ್ಮಿಕೊಂಡ ಮೆರವಣಿಗೆಗೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಚಾಲನೆ ನೀಡಿದರು.
ಬುಧವಾರ ಬೆಳಿಗ್ಗೆ ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಅರ್ಚನೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮೆರವಣಿಗೆಯಲ್ಲಿ ತುಳುನಾಡ ಧ್ವಜ ರಾರಾಜಿಸುತ್ತಿತ್ತು. ಕಾಂಗ್ರೆಸ್ ಧ್ವಜದೊಂದಿಗೆ ಕಾರ್ಯಕರ್ತರ ಘೋಷಣೆ, ನಡಿಗೆಗೆ ವೇಗ ತುಂಬುವಂತಿತ್ತು.
ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಚುನಾವಣಾ ಸಮಿತಿ ಅಧ್ಯಕ್ಷ ಬಿ. ರಮಾನಾಥ ರೈ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮತ್ತಿತರರು ಉಪಸ್ಥಿತರಿದ್ದರು.