ಕಡಬ: ಸ್ಪೋಟಕ ಬಳಸಿ ಕಲ್ಲು ಒಡೆಯುತ್ತಿರುವ ಪರಿಣಾಮ ಮನೆಗಳಿಗೆ ಹಾನಿಯುಂಟಾಗುವುದರ ಜತೆ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ಸ್ಪೋಟಕ ನಡೆಸುವವರ ವಿರುದ್ಧ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕಿನ ಏನೆಕಲ್ಲು ಗ್ರಾಮದ ಕುಕ್ಕಿಪ್ಪನ ಮನೆ ನಿವಾಸಿ ಆನಂದ ಗೌಡ ಎಂಬವರು ಈ ಕುರಿತು ಠಾಣೆಗೆ ದೂರು ನೀಡಿದ್ದು, ಸಮೀಪದ ನಿವಾಸಿ ದಯಾನಂದ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಏನೆಕಲ್ಲು ಗ್ರಾಮದ ಅಜಿರುಪೊಲಿ ಎಂಬಲ್ಲಿ ಕಳೆದ ಎರಡು ತಿಂಗಳಿನಿಂದ ಅಕ್ರಮ ಸ್ಪೋಟಕಗಳನ್ನು ಬಳಸಿ ಕಲ್ಲುಗಳನ್ನು ಒಡೆದು ಸೈಜುಕಲ್ಲುಗಳನ್ನಾಗಿ ಮಾಡಲಾಗುತ್ತಿದ್ದು, ಸ್ಪೋಟಕ ಬಳಕೆ ಪರಿಣಾಮ ಆನಂದ ಗೌಡ ಎಂಬವರ ಮನೆಯ ಶೀಟುಗಳಿಗೆ ಹಾನಿಯಾಗಿದೆ. ಅಲ್ಲದೆ ಧೂಳಿನಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.