ತುಮಕೂರು: ಸುಟ್ಟು ಕರಕಲಾದ ಕಾರಿನಲ್ಲಿ ಮೂವರ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಕೋರಾ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ತುಮಕೂರಿನ ಸ್ವಾಮಿ ಸಹಿತ ಇತರ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶುಕ್ರವಾರ ತುಮಕೂರಿನ ಕೆರೆಯೊಂದರ ಬಳಿ ಸುಟ್ಟು ಕರಕಲಾದ ಕಾರಿನಲ್ಲಿ ಬೆಳ್ತಂಗಡಿ ಮೂಲದ ಆಟೋ ಚಾಲಕ ಸಾಹುಲ್ ಹಮೀದ್ (45), ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ಇಸಾಕ್ (56) ಹಾಗೂ ಶಿರ್ಲಾಲು ಗ್ರಾಮದ ಸಿದ್ದಿಕ್ (34) ಈ ಮೂವರ ಶವ ಪತ್ತೆಯಾಗಿತ್ತು. ತಕ್ಷಣ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದರು. ಇದೀಗ ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಹನ್ನೊಂದು ದಿನಗಳ ಹಿಂದೆ ಮದ್ದಡ್ಕದ ರಫೀಕ್ ಎಂಬವರ ಮಾಲಕತ್ವದ ಕಾರಿನಲ್ಲಿ ಮೃತ ಮೂವರು ವ್ಯವಹಾರ ಸಂಬಂಧ ಹೋಗಿದ್ದರು. ಬಳಿಕ ಶವವಾಗಿ ಪತ್ತೆಯಾಗಿದ್ದಾರೆ. ಈ ನಡುವೆ ನಕಲಿ ಚಿನ್ನದ ದಂಧೆಗೆ ಬಲಿಯಾಗಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























