ಪುತ್ತೂರು: ಭಾರತೀಯ ಮೂಲದ ಮಹಿಳೆಯೊಬ್ಬರ ಶವ ಕಸದ ತೊಟ್ಟಿಯಲ್ಲಿ ಪತ್ತೆಯಾದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಹೈದರಾಬಾದ್ ಮೂಲದ ಚೈತನ್ಯ ಮದಗಣಿ (36) ಮೃತ ಮಹಿಳೆ.
ಈಕೆಯ ಶವ ಆಸ್ಟ್ರೇಲಿಯಾದ ಬಕ್ಲಿಯ ರಸ್ತೆ ಬದಿಯಲ್ಲಿ ಇರಿಸಿದ್ದ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಚೈತನ್ಯ ಹಲವು ವರ್ಷಗಳಿಂದ ತನ್ನ ಪತಿ ಅಶೋಕ್ ಜತೆ ಆಸ್ಟ್ರೇಲಿಯಾದ ಪಾಯಿಂಟ್ ಕುಕ್ಕ್ ಎಂಬಲ್ಲಿ ವಾಸವಾಗಿದ್ದು, ಒಂದು ಗಂಡು ಮಗು ಹೊಂದಿದ್ದಾರೆ. ಶನಿವಾರ ಪೊಲೀಸರು ಮಹಿಳೆಯ ಶವವನ್ನು ಪತ್ತೆ ಹಚ್ಚಿದ್ದು, ಪ್ರಾಥಮಿಕ ತನಿಖೆ ಪ್ರಕಾರ ಪತಿಯೇ ಮಹಿಳೆಯ ಹತ್ಯೆಗೈದು ಕಸದ ತೊಟ್ಟಿಗೆ ಎಸೆದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಇತ್ತ ಸಾವಿನ ಸುದ್ದಿ ಗೊತ್ತಾಗುತ್ತಿದ್ದಂತೆ ಚೈತನ್ಯ ಪೋಷಕರು ಅಳಿಯನ ವಿರುದ್ಧ ಅನುಮಾನ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದು, ಪತಿಯೇ ಈ ಕೃತ್ಯ ಎಸಗಿ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ಕಳುಹಿಸಿಕೊಡುವಂತೆ ಪೋಷಕರು ಮನವಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತನಕ ಯಾರನ್ನೂ ಬಂಧಿಸಲಾಗಿಲ್ಲ. ತನಿಖೆ ಮುಂದುವರಿಯುತ್ತಿದೆ.