ಸುರತ್ಕಲ್: ಸುರತ್ಕಲ್ ಖಾಸಗಿ ಅನುದಾನಿತ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳು ಮಂಗಳವಾರ ಎಸ್. ಎಸ್. ಎಲ್. ಸಿ. ಪರೀಕ್ಷೆ ಬರೆದ ಬಳಿಕ ಮನೆಗೆ ಮರಳದೆ ನಾಪತ್ತೆಯಾದ ಘಟನೆ ನಡೆದಿದ್ದು, ನಾಲ್ವರು ವಿದ್ಯಾರ್ಥಿಗಳ ಮೃತದೇಹ ಹಳೆಯಂಗಡಿ ಕೊಪ್ಪಳ ಅಣೆಕಟ್ಟ ರೈಲ್ವೇ ಸೇತುವೆಯ ಕೆಳಭಾಗದ ನದಿಯಲ್ಲಿ ಪತ್ತೆಯಾಗಿದೆ.
ಸುರತ್ಕಲ್ ಅಗರಮೇಲು ನಿವಾಸಿ ಯಶ್ವಿತ್ (15), ಹಳೆಯಂಗಡಿ ತೋಕೂರು ನಿವಾಸಿ ರಾಘವೇಂದ್ರ (15), ಗುಡ್ಡಕೊಪ್ಪ ನಿವಾಸಿ ನಿರೂಪ (15) ಮತ್ತು ಚಿತ್ರಾಪುರ ನಿವಾಸಿ ದೇವದಾಸ್ ಎಂಬವರ ಪುತ್ರ ಅನ್ವಿತ್ (15) ಮೃತಪಟ್ಟವರು.
ಈ ನಾಲ್ವರು ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿದ ಹಳೆಯಂಗಡಿ ಕರಿತೋಟದಲ್ಲಿ ನಂದಿನಿ ನದಿಯಲ್ಲಿ ಈಜಾಡಲು ಹೋಗಿದ್ದರು. ಈ ತಂಡದಲ್ಲಿ ಒಟ್ಟು ಏಳು ಮಂದಿ ಇದ್ದರು ಎನ್ನಲಾಗಿದೆ. ಇವರು ಸುರತ್ಕಲ್ ಮಾರುಕಟ್ಟೆ ಬಳಿ ಅವಿಲ್ ಮಿಲ್ಕ್ ಕುಡಿದು ಬಳಿಕ ರಿಕ್ಷ ಪಾರ್ಕ್ ಬಳಿ ಬಂದಿದ್ದಾರೆ. ಬಳಿಕ ಹಳೆಯಂಗಡಿ ಕಡೆ ಹೋಗುವ ಬಸ್ ಹಿಡಿದಿದ್ದಾರೆ ಎಂದು ಸಹ ವಿದ್ಯಾರ್ಥಿ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ.
ಇಬ್ಬರು ಮನೆಯಿಂದ ಡ್ರೆಸ್ ತಂದಿದ್ದು ಶಾಲಾ ಸಮವಸ್ತ್ರ ಬದಲಿಸಿದ್ದಾರೆ ಎಂಬ ಮಾಹಿತಿಯೂ ಪೊಲಿಸರಿಗೆ ಲಭ್ಯವಾಗಿತ್ತು. ಇದೀಗ ನೀರುಪಾಲಾಗಿದ್ದ ನಾಲ್ವರ ಮೃತದೇಹ ಪತ್ತೆಯಾಗಿದೆ.
ಪ್ರಕರಣ ದಾಖಲಿಸಿರುವ ಸುರತ್ಕಲ್ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.