ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಬ್ರಿಟನ್‌ನಲ್ಲೇ ವಿರೋಧ

ಪ್ರಧಾನಿ ಮೋದಿಯನ್ನು ಕೀಳಾಗಿ ಬಿಂಬಿಸಲು ತಯಾರಿಸಿದ ಡಾಕ್ಯುಮೆಂಟರಿ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ತಯಾರಿಸಿದ ಆಕ್ಷೇಪಾರ್ಹ ಸಾಕ್ಷ್ಯಚಿತ್ರಕ್ಕೆ ಜಗತ್ತಿನಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ಬಿಬಿಸಿ ಡಾಕ್ಯುಮೆಂಟರಿ ಕುರಿತ ಟ್ವೀಟ್‌ಗಳಿಗೆ ನಿರ್ಬಂಧ ಹೇರಿದೆ.
ಗುಜರಾತ್ ಗಲಭೆ ಕುರಿತು ವಿಮರ್ಶಾತ್ಮಕ ಸಾಕ್ಷ್ಯಚಿತ್ರ ಕುರಿತಾದ ಟ್ವೀಟ್‌ಗಳನ್ನು ಕೇಂದ್ರ ಸರ್ಕಾರ ಶನಿವಾರ ನಿರ್ಬಂಧಿಸಿದ್ದು, 2002ರ ಗುಜರಾತ್ ಗಲಭೆ ಮತ್ತು ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ತೆಗೆದುಹಾಕುವಂತೆ ಟ್ವಿಟರ್ ಮತ್ತು ಯೂಟ್ಯೂಬ್‌ಗೆ ಆದೇಶಿಸಿದೆ.
2002ರ ಗುಜರಾತ್ ಗಲಭೆ ವಿಚಾರವಾಗಿ ಬ್ರಿಟನ್ ಮೂಲದ ಸುದ್ದಿಸಂಸ್ಥೆ ಬಿಬಿಸಿ ʼಇಂಡಿಯಾ: ದಿ ಮೋದಿ ಕ್ವಷ್ಚನ್ʼ ಎಂಬ ಶೀರ್ಷಿಕೆಯಡಿ ಸಾಕ್ಷ್ಯಚಿತ್ರ ತಯಾರಿಸಿದೆ. ಗುಜರಾತ್ ಗಲಭೆಯಲ್ಲಿ ಅಂದಿನ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರು ಕೈಗೊಂಡ ನಿರ್ಧಾರಗಳನ್ನು ಸಾಕ್ಷ್ಯಚಿತ್ರದಲ್ಲಿ ಟೀಕಿಸಲಾಗಿದ್ದು, ಡಾಕ್ಯುಮೆಂಟರಿಯನ್ನು 2 ಭಾಗಗಳಲ್ಲಿ ನಿರ್ಮಾಣ ಮಾಡಲಾಗಿದೆ.
ಈ ಡಾಕ್ಯುಮೆಂಟರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದ ಮುಸ್ಲಿಂ ಅಲ್ಪಸಂಖ್ಯಾತರ ಕುರಿತು ಇರುವ ಧೋರಣೆಯನ್ನು ಬಿಂಬಿಸಲಾಗಿದೆ. 2002ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಗೋಧ್ರೋತ್ತರ ಗಲಭೆ ಕುರಿತ ಮಾಹಿತಿ ಇದೆ. ಈ ಗಲಭೆಯಲ್ಲಿ ಮೋದಿ ಅವರ ಪಾತ್ರದ ಉಲ್ಲೇಖ ಇದೆ. ಗಲಭೆ ನಂತರ ನಡೆದ ತನಿಖೆಗಳ ಬಗ್ಗೆ ಕೂಡಾ ಡಾಕ್ಯುಮೆಂಟರಿಯಲ್ಲಿ ಉಲ್ಲೇಖ ಇದೆ. ಇದಲ್ಲದೆ ಮೋದಿ ಅವರು ಪ್ರಧಾನಿ ಆದ ಮೇಲೆ ಕೈಗೊಂಡ ಆರ್ಟಿಕಲ್ 370 ರದ್ದತಿ ನಿರ್ಧಾರದ ಬಗ್ಗೆಯೂ ಪ್ರಸ್ತಾಪ ಇದೆ ಎಂದು ಬಿಬಿಸಿ ಸಂಸ್ಥೆ ಹೇಳಿದೆ.
ಈ ಡಾಕ್ಯುಮೆಂಟರಿಗೆ ಬ್ರಿಟನ್‌ನಲ್ಲೇ ವಿರೋಧ ವ್ಯಕ್ತವಾಗಿದೆ. ಪ್ರಜಾಪ್ರಭುತ್ವ ಇರುವ ಭಾರತ ದೇಶದಲ್ಲಿ ಪ್ರಜೆಗಳಿಂದಲೇ ಆಯ್ಕೆಯಾದ ಒಬ್ಬ ವ್ಯಕ್ತಿ ಬಗ್ಗೆ ಅವಹೇಳನ ಮಾಡೋದು ಸರಿಯಲ್ಲ ಎಂದು ಬ್ರಿಟನ್‌ ಸಂಸದ ಲಾರ್ಡ್ ರೆಮಿ ರೇಂಜರ್ ಹೇಳಿದ್ದಾರೆ. ಬಿಬಿಸಿ ಪಕ್ಷಪಾತಿ ವರದಿಗಾರಿಕೆ ಮಾಡುತ್ತಿದೆ. ಭಾರತದ ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡಿದ್ದೀರಿ, ಕೋಟ್ಯಂತರ ಭಾರತೀಯರಿಗೆ ಬೇಸರ ಮೂಡಿಸಿದ್ದೀರಿ ಎಂದು ಲಾರ್ಡ್ ರೆಮಿ ಆರೋಪಿಸಿದ್ದಾರೆ. ಗಲಭೆ, ಜೀವ ಹಾನಿಯನ್ನು ಖಂಡಿಸಲೇ ಬೇಕು, ಜತೆಗೆ ಬಿಬಿಸಿ ಮಾಡಿರುವ ಪಕ್ಷಪಾತಿ ವರದಿಗಾರಿಕೆಯನ್ನೂ ಖಂಡಿಸಬೇಕು ಅಂತಾ ರೆಮಿ ಟ್ವೀಟ್ ಮಾಡಿದ್ದಾರೆ.
ಸಾಕ್ಷ್ಯಚಿತ್ರಕ್ಕೆ ಭಾರತ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಾಕ್ಷ್ಯಚಿತ್ರವನ್ನು ಪ್ರಚಾರದ ತುಣುಕು ಇದು ವಸ್ತುನಿಷ್ಠತೆಯ ಕೊರತೆ ಮತ್ತು ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಕಿಡಿಕಾರಿದೆ.
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ನರೇಂದ್ರ ಮೋದಿ ಅವರ ಬೆನ್ನಿಗೆ ನಿಂತಿದ್ದಾರೆ. ಈ ಕುರಿತು ಬ್ರಿಟನ್ ಸಂಸತ್‌ನಲ್ಲೇ ಕಿಡಿಕಾರಿದ ಅವರು, ಗುಜರಾತ್ ಗಲಭೆ ಬಗ್ಗೆ ಬ್ರಿಟನ್ ಸರ್ಕಾರದ ನಿಲುವು ಸ್ಪಷ್ಟವಾಗಿದೆ ಮತ್ತು ದೀರ್ಘಕಾಲಿಕವಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಖಂಡಿತವಾಗಿಯೂ ನಾವು ಕಿರುಕುಳ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top