ಪುತ್ತೂರು: ಮುರದಲ್ಲಿ ಸಂಭವಿಸಿದ ಟಿಪ್ಪರ್ ಹಾಗೂ ಸ್ಕೂಟರ್ ನಡುವಿನ ಅಪಘಾತದಲ್ಲಿ, ದ್ವಿಚಕ್ರ ವಾಹನ ಸವಾರ ತೇಜಸ್ ಸಾವನ್ನಪ್ಪಿದ್ದು, ಟಿಪ್ಪರ್ ಚಾಲಕನ ವಿರುದ್ಧ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂದೀಪ್ ಎಂಬವರು ನೀಡಿದ ದೂರಿನ ಮೇರೆಗೆ ಟಿಪ್ಪರ್ ಲಾರಿ ಚಾಲಕ ಬಿ.ಕೆ. ಮಹಮ್ಮದ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಫೆ.22 ರಂದು ಸಂಜೆ ಟಿಪ್ಪರ್ ಲಾರಿ ಚಾಲಕ ಬಿ.ಕೆ. ಮಹಮ್ಮದ್ ಎಂಬವರು ಟಿಪ್ಪರ್ ಲಾರಿಯನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಬಕ ಗ್ರಾಮದ ಮುರ ಎಂಬಲ್ಲಿ, ಲಾರಿಯ ಮುಂದೆ ಹೋಗುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ
ಸ್ಕೂಟರ್ ಸವಾರ ತೇಜಸ್ ಪಿ (24) ಹಾಗೂ ಸಹಸವಾರ ಪವನ್ ಕುಮಾರ್ (26) ಗಂಭೀರ ಗಾಯಗೊಂಡಿದ್ದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ತೇಜಸ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ.
ಸಹಸವಾರನಾಗಿದ್ದ ಪವನ್ ಕುಮಾರ್ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
























