ಪುತ್ತೂರು: ಮತದಾನ, ಕೇವಲ ನಮ್ಮ ಹಕ್ಕು ಮಾತ್ರ ಅಲ್ಲ ಅದು ನಮ್ಮ ಕರ್ತವ್ಯ. ಹಕ್ಕುಗಳ ಕುರಿತು ಮಾತನಾಡುವ ನಾವು ಕರ್ತವ್ಯವನ್ನು ಮೊದಲು ನಿಭಾಯಿಸಬೇಕು. ನಮ್ಮ ದೇಶಕ್ಕೆ ಪ್ರಜಾಪ್ರಭುತ್ವ ಬರಲು ಹಲವಾರು ಜನರ ಹೋರಾಟ, ತ್ಯಾಗ ಇದೆ. ಆದ್ದರಿಂದ ಪ್ರತಿಯೊಬ್ಬರ ಮತದಾನವು ಅತಿ ಅಮೂಲ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಗಣಕಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ, ಸ್ವೀಪ್ ನ ತರಬೇತುದಾರೆ ಡಾ. ಭಾರತಿ ಪಿಲಾರ್ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲೆ ಸ್ವೀಪ್ ಸಮಿತಿ, ಮಂಗಳೂರು ನೆಹರು ಯುವ ಕೇಂದ್ರ, ದ.ಕ ಜಿಲ್ಲಾ ಪಂಚಾಯಿತಿ, ಮತದಾನ ಸಾಕ್ಷರತ ಕ್ಲಬ್, ಪೊಲಿಟಿಕಲ್ ಫಾರ್ಮ್, ಎನ್.ಸಿ.ಸಿ., ಎನ್. ಎಸ್. ಎಸ್. ರೋವರ್ಸ್ ಆ್ಯಂಡ್ ರೇಂಜರ್ಸ್ ಹಾಗೂ ಯೂಥ್ ರೆಡ್ ಕ್ರಾಸ್ ಸಹಯೋಗದಲ್ಲಿ ಆಯೋಜಿಸಿದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್ ಅಧ್ಯಕ್ಷತೆ ವಹಿಸಿ, ನಮ್ಮ ಮೂಲಭೂತ ಹಕ್ಕಾದ ಮತ ಚಲಾಯಿಸಲು ನೀಡುವ ರಜೆಯನ್ನು ವ್ಯರ್ಥ ಮಾಡುವವರು ಇಂದು ಹೆಚ್ಚಾಗಿದ್ದಾರೆ. ಇದರಿಂದ ಒಳ್ಳೆಯ ಅಭ್ಯರ್ಥಿಯನ್ನು ಆರಿಸಲು ಸಾಧ್ಯವಾಗುವುದಿಲ್ಲ. ಒಳ್ಳೆಯ ವ್ಯಕ್ತಿಯನ್ನು ಆರಿಸುವಲ್ಲಿ ನಾವು ಸಫಲರಾಗಬೇಕು. ಅದು ವಿದ್ಯಾರ್ಥಿಗಳ ಜವಾಬ್ದಾರಿ. ಈ ಮೂಲಕ ಯುವ ಸಮುದಾಯ ಎಚ್ಚೆತ್ತುಕೊಳ್ಳುವ ಕಾರ್ಯ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಮತದಾನ ಜಾಗೃತಿ ಕುರಿತಾದ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಸಂಯೋಜಕ ಡೊಂಬಯ್ಯ ಇಡ್ಕಿದು, ನೆಹರು ಯುವ ಕೇಂದ್ರದ ಪ್ರತಿನಿಧಿ ಶಾಂತಪ್ಪ, ಕಾಲೇಜಿನ ಸ್ವೀಪ್ ಸಂಯೋಜಕಿ, ಉಪನ್ಯಾಸಕಿ ದೀಪಿಕಾ ಎಸ್., ಮತದಾರ ಸಾಕ್ಷರತಾ ಘಟಕದ ವಿದ್ಯಾರ್ಥಿ ಅಭಯ್ ಉಪಸ್ಥಿತರಿದ್ದರು. ಉಪನ್ಯಾಸಕ ಮಧುಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.