ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪುತ್ತೂರಿನಲ್ಲಿ ಸಂತ ಸೇವಾಲಾಲ್ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಣಾ ಕಾರ್ಯಕ್ರಮ

ಪುತ್ತೂರು: ಸಮಾಜದಲ್ಲಿ ಜಾತಿಪದ್ಧತಿಯಂತಹ ದುಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿದ ದಾರ್ಶನಿಕರು ಮಾನವ ಜನ್ಮಕ್ಕೆ ಅಭೂತಪೂರ್ವ ಚಿಂತನೆಗಳನ್ನು ನೀಡುವ ಮೂಲಕ ಈ ಸಮಾಜದಲ್ಲಿ ಒಂದಾಗಿ ಬದುಕಬೇಕು ಎನ್ನುವ ಪಾಠ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ನಾವು ನಡೆದುಕೊಳ್ಳಬೇಕಾಗಿದೆ ಎಂದು ಪುತ್ತೂರು ತಹಶೀಲ್ದಾರ್ ಪುರಂದರ ಅವರು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುತ್ತೂರು ಆಡಳಿತ ಸೌಧದ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಂತ ಸೇವಾಲಾಲ್ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದು ಜಾತಿಯ ಜತೆಗೆ ಅಂತಸ್ತಿಗಾಗಿ ಹೋರಾಟ ನಡೆಸುವ ಮನೋಭಾವ ಹೆಚ್ಚಾಗುತ್ತಿದೆ. ಇಂತಹ ಮಾನಸಿಕ ದೌರ್ಬಲ್ಯಗಳ ವಿರುದ್ಧ ಹೋರಾಡುವ ಚಿಂತನೆ ನಮ್ಮಲ್ಲಿ ಬೆಳೆಯಬೇಕಾಗಿದೆ. ಹಾಗಾದಾಗ ಮಾತ್ರ ಜೀವನದಲ್ಲಿ ನಾವು ಮುಂದೆ ಬರಬಹುದಾಗಿದೆ. ಇದಕ್ಕಾಗಿ ಮೊದಲು ನಮ್ಮ ದೌರ್ಬಲ್ಯಗಳನ್ನು ನಾವು ಅರಿತುಕೊಳ್ಳಬೇಕು. ಜಾತಿಗಳ ಅಭಿವೃದ್ಧಿಗಾಗಿ ನೀಡಲಾಗುವ ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು. ಇದು ಅಭಿವೃದ್ಧಿಗೆ ಪ್ರೇರಣೆಯಾಗಬೇಕು ಎಂದು ಅವರು ಹೇಳಿದರು.



































 
 

ಪ್ರವರ್ಗ 1ಕ್ಕೆ ಸೇರಿಸಿ- ಸಮುದಾಯ ಭವನ ನೀಡಿ

ಕಾರ್ಯಕ್ರಮದಲ್ಲಿ ಮಾತನಾಡಿದ ಸವಿತಾ ಸಮಾಜದ ಮುಖಂಡರಾದ ರವೀಂದ್ರ ಬಂಡಾರಿ ಪಾಣಾಜೆ ಅವರು ಮಾತನಾಡಿ, ಸವಿತಾ ಸಮಾಜ ಮನುಷ್ಯನ ಹುಟ್ಟಿನಿಂದ ಸಾಯುವ ತನಕವೂ ಬೇಕಾಗುತ್ತದೆ. ಆದರೆ ಈ ಸಮಾಜವನ್ನು ಆರ್ಥಿಕತೆ ಮತ್ತು ಶಿಕ್ಷಣದ ಕೊರತೆ ಕಾಡುತ್ತಿದೆ. ಹಾಗಾಗಿ ಈ ಸಮಾಜವನ್ನು ಪ್ರವರ್ಗ 1ಕ್ಕೆ ಸೇರಿಸುವ ಕೆಲಸ ನಡೆಯಬೇಕಾಗಿದೆ. ಅದರ ಜತೆಗೆ ವ್ಯಸನಗಳಿಂದ ಈ ಸಮಾಜ ಮುಕ್ತವಾಗಬೇಕು. ಪುತ್ತೂರಿನಲ್ಲಿ ಸವಿತಾ ಸಮಾಜಕ್ಕೆ ಒಂದು ಸಮುದಾಯ ಭವನ ನಿರ್ಮಾಣವಾಗಬೇಕು. ಅಧಿಕಾರಿ ವರ್ಗ ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು ಎಂದು ಹೇಳಿದ ಅವರು ಜನತೆಗೆ 5 ಗ್ಯಾರಂಟಿಗಳನ್ನು ಸರ್ಕಾರ ನೀಡಿದ ಹಾಗೇ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ನೀಡಬೇಕು ಎಂದು ಅವರು ಆಗ್ರಹಿಸಿದರು.

ಬಂಜಾರ ಸಮಾಜದ ಮುಖಂಡರಾದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ನಿರ್ದೇಶಕ ರೂಪ್ಲಾ ನಾಯಕ್ ಅವರು ಮಾತನಾಡಿ, ಬಂಜಾರ ಸಮಾಜದಲ್ಲಿ ಶೇ.10 ರಷ್ಟು ಮಂದಿ ಮಾತ್ರ ಅಭಿವೃದ್ಧಿಯಾಗಿದ್ದಾರೆ, ಉಳಿದ ಶೇ. 90 ಮಂದಿ ಈಗಲೂ ಕಷ್ಟದಾಯಕ ಪರಿಸ್ಥಿತಿಯಲ್ಲೇ ಇದ್ದಾರೆ. ಈ ಸಮಾಜಕ್ಕೆ ಪೂರಕವಾದ ವ್ಯವಸ್ಥೆಗಳು ಬೇಕಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್ ಅವರು ಮಾತನಾಡಿ, ಈ ನಾಡಿನಲ್ಲಿ ಹಲವು ಸಂತ, ದಾರ್ಶನಿಕರು ಸಮಾಜಗಳ ನಡುವೆ ಇದ್ದ ಕಂದಕಗಳನ್ನು ಮುಚ್ಚಲು ಪ್ರಯತ್ನ ಮಾಡಿದ್ದಾರೆ. ಆ ಮೂಲಕ ಜನತೆಗೆ ಉತ್ತಮವಾದ ಜೀವನದಾರಿ ತೋರಿಸಿದ್ದಾರೆ. ಉತ್ತಮ ಗುಣಮಟ್ಟದ ಶಿಕ್ಷಣದಿಂದ ಮಾತ್ರ ಜೀವನಕ್ಕೆ ಯಶಸ್ಸು ಸಿಗುತ್ತದೆ. ಹಿಂದುಳಿದ ಜನತೆ ಈ ಬಗ್ಗೆ ಯೋಚನೆ ಮಾಡಬೇಕು ಎಂದರು.

ವೇದಿಕೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇಲಾಖೆಯ ದಯಾನಂದ್ ಸ್ವಾಗತಿಸಿದರು. ಉಪತಹಶೀಲ್ದಾರ್ ರಾಮಣ್ಣ ನಾಯ್ಕ್ ಇದ್ದರು. ಉಪತಹಶೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top