ಪುತ್ತೂರು: ಫೆ.18 ಹಾಗೂ 19 ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನಲ್ಲಿ ನಡೆಯಲಿರುವ ತುಳುನಾಡ ಜಾತ್ರೆ ‘ಶ್ರೀ ಒಡಿಯೂರು ರಥೋತ್ಸವ’ ಹಾಗೂ ‘ಸಿರಿರಾಮೆ ತುಳು ಸಾಹಿತ್ಯ ಸಮ್ಮೇಳನ’ದ ಅಂಗವಾಗಿ ಪುತ್ತೂರಿನಿಂದ ತೆರಳುವ ಬೃಹತ್ ವೈಭವದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಫೆ.16 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಬೆಳಿಗ್ಗೆ 10.30 ಕ್ಕೆ ತೆರಳಲಿದೆ ಎಂದು ಪುತ್ತೂರು ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರು ಭಾಗದಿಂದ ಹೊರೆಕಾಣಿಕೆ ಸಮರ್ಪಣೆಗಾಗಿ ಈಗಾಗಲೇ ಎಲ್ಲಾ ತಾಲೂಕುಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಭಕ್ತಾದಿಗಳು ಭಕ್ತಿಪೂರ್ವಕವಾಗಿ ಹಸಿರುವಾಣಿ ಸಮರ್ಪಿಸಿ ಸಹಕಾರ ನೀಡುವುದರ ಜತೆಗೆ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವಂತೆ ವಿನಂತಿಸಿದರು.
ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ಸಮಿತಿಯಲ್ಲಿ ಹಲವಾರು ವಿಧದ ಸಾಮಾಜಿಕ ಸಂಸ್ಥೆಯಲ್ಲಿ ಗುರುತಿಸಿಕೊಂಡವರು ಇದ್ದು, ಧಾರ್ಮಿಕತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಜತೆಗೆ ಎಲ್ಲರನ್ನು ಒಗ್ಗೂಡಿಸುವ ಪ್ರಯತ್ನ ಈ ಕಾರ್ಯದಿಂದ ನಡೆಯಲಿದೆ. ಹೊರೆಕಾಣಿಕೆ ಸಮರ್ಪಣೆಗಾಗಿ ತಾಲೂಕಿನ ಒಂದೊಂದು ವಲಯಗಳಿಗೆ ಒಬ್ಬರಿಗೆ ಜವಾಬ್ದಾರಿ ನೀಡಲಾಗಿದೆ ಎಂದ ಅವರು, ಪುತ್ತೂರಿನಿಂದ ಸುಮಾರು 50 ಕ್ವಿಂಟಾಲ್ ಅಕ್ಕಿ ಸಮರ್ಪಣೆ ಮಾಡುವ ಗುರಿ ಹೊಂದಲಾಗಿದೆ. ಹೊರೆಕಾಣಿಕೆ ಮೆರವಣಿಗೆ ಫೆ.16 ರಂದು ಬೆಳಿಗ್ಗೆ ಪುತ್ತೂರಿನಿಂದ ಹೊರಟು ವಿಟ್ಲ, ಕನ್ಯಾನ ಮಾರ್ಗವಾಗಿ ಒಡಿಯೂರಿಗೆ ತೆರಳಲಿದೆ. ಬೆಳಿಗ್ಗೆ 10 ಗಂಟೆಗೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಸಮಿತಿಯ ಗೌರವಾಧ್ಯಕ್ಷ ಸುರೇಶ್ ಪುತ್ತೂರಾಯ ಮಾತನಾಡಿ, ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಅತ್ಯಂತ ವೈಭವದಿಂದ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಸಹಕರಿಸುವಂತೆ ವಿನಂತಿಸಿದರು.
ಇನ್ನೋರ್ವ ಗೌರವಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಹೊರೆಕಾಣಿಕೆ ಸಮರ್ಪಣೆ ನಿಟ್ಟಿನಲ್ಲಿ ಪುತ್ತೂರಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ 7 ವಲಯಗಳನ್ನಾಗಿ ಮಾಡಲಾಗಿದ್ದು, ಇದಕ್ಕೆ ಸಮಿತಿಗಳನ್ನು ರಚಿಸಿ ಗರಿಷ್ಠ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಾಲಯ ಉದ್ಘಾಟನೆ:
ಹೊರೆಕಾಣಿಕೆ ಸಮರ್ಪಣೆ ಅಂಗವಾಗಿ ಫೆ.14 ರಂದು ರಥಬೀದಿ ಬಳಿ ಕಾರ್ಯಾಲಯ ಉದ್ಘಾಟಣೆಗೊಳ್ಳಲಿದೆ. ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ಕಾರ್ಯಾಲಯವನ್ನು ಉದ್ಘಾಟಿಸಲಿದ್ದಾರೆ. ಹಸಿರುವಾಣಿ ನೀಡುವ ಭಕ್ತಾದಿಗಳು ಫೆ.14 ರಿಂದ 15 ರಾತ್ರಿಯೊಳಗೆ ಕಾರ್ಯಾಲಯಕ್ಕೆ ತಂದು ಒಪ್ಪಿಸಬೇಕೆಂದು ಸಮಿತಿ ವಿನಂತಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಸುಧೀರ್ ನೋಂಡ, ಕಾರ್ಯಾಧ್ಯಕ್ಷ ಕೃಷ್ಣ ಎಂ. ಅಳಿಕೆ ಉಪಸ್ಥಿತರಿದ್ದರು.