ಸವಣೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2023-24ನೇ ಸಾಲಿನ ಯು.ಕೆ.ಜಿ. ತರಗತಿ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ದಿನವನ್ನು ಏರ್ಪಡಿಸಲಾಯಿತು.
ಸಮಾರಂಭವನ್ನು ಕಸ್ತೂರಿಕಲಾ ಎಸ್. ರೈ ಉದ್ಘಾಟಿಸಿ ಶುಭ ಹಾರೈಸಿದರು.
ಅತಿಥಿಯಾಗಿ ಆರೆಲ್ತಡಿ ಅಂಗನವಾಡಿ ಶಿಕ್ಷಕಿ ಮಮತಾ ಸಿ. ಭಾಗವಹಿಸಿ, ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ ಮಾತನಾಡಿ, ಮಕ್ಕಳನ್ನು ರೂಪಿಸುವ ಕೆಲಸ ಕೇವಲ ಶಾಲೆಯದ್ದು ಮಾತ್ರವಲ್ಲ. ಬದಲಿಗೆ ಅದು ಶಿಕ್ಷಕರು ಮತ್ತು ಪೋಷಕರು ಇಬ್ಬರಿಗೂ ಸೇರಿದ್ದು. ಎರಡೂ ಕೈ ಸೇರಿದಾಗ ಚಪ್ಪಾಳೆ ಆಗುವಂತೆ ಶಾಲೆ ಮತ್ತು ಮನೆಗಳು ಎರಡೂ ಸೇರಿದಾಗ ಮಗುವಿನ ಶಿಕ್ಷಣ ಸಮರ್ಪಕವಾಗಲು ಸಾಧ್ಯ ಎಂದರು.
ಶಾಲಾ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಟ್ರಸ್ಟಿ ರಶ್ಮಿ ಅಶ್ವಿನ್ ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ, ಪ್ರಾಂಶುಪಾಲ ಸೀತಾರಾಮ ಕೇವಳ, ಉಪ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯು.ಕೆ.ಜಿ. ತರಗತಿ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಒಂದನೇ ತರಗತಿಯ ಐಷಾನಿ ಆರಿಗ ಸಂವಿಧಾನದ ಪೀಠಿಕೆ ವಾಚನ ಮಾಡಿದರು. ಅವಿ ಅಶ್ವಿನ್ ಶೆಟ್ಟಿ ಸ್ವಾಗತಿಸಿದರು. ಸಲ್ವಾ ಫಾತಿಮಾ ವಂದಿಸಿದರು. 9 ನೇ ತರಗತಿಯ ಆಯಿಷತ್ ಜಸ್ನಾ ಕಾರ್ಯಕ್ರಮ ನಿರೂಪಿಸಿದರು.