ಬಂಟ್ವಾಳ : ರೈಲು ಡಿಕ್ಕಿಯಾಗಿ ಕೂಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಬಿ.ಸಿ.ರೋಡು ಸಮೀಪದ ಮಾರ್ನಬೈಲು ಎಂಬಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಮೂಲತಃ ಮಡಂತ್ಯಾರು ಪಣಕಜೆ ನಿವಾಸಿ, ಪ್ರಸ್ತುತ ಸಜೀಪಮುನ್ನೂರು ಗ್ರಾ.ಪಂ.ವ್ಯಾಪ್ತಿಯ ಮಾರ್ನಬೈಲು ದಾಸರಗುಡ್ಡೆಯಲ್ಲಿ ವಾಸವಾಗಿರುವ ಹರಿಶ್ಚಂದ್ರ (37) ಮೃತಪಟ್ಟ ವ್ಯಕ್ತಿ.
ಕೂಲಿ ಕಾರ್ಮಿಕರಾಗಿರುವ ಹರಿಶ್ಚಂದ್ರ ಇಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ತೆರಳಿದ್ದು, ರೈಲ್ವೆ ಹಳಿಯನ್ನು ದಾಟುವ ಸಂದರ್ಭ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿರಬೇಕೆಂದು ಸ್ಥಳೀಯರು ತಿಳಿಸಿದ್ದಾರೆ.
ರೈಲ್ವೆ ಪೋಲೀಸ್ ಇಲಾಖೆಯ ಎ.ಎಸ್.ಐ.ಜಾನ್ ಕೊರಿಯ ಕೋಸ್ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಂಟ್ವಾಳ ಠಾಣಾ ಸಹಾಯಕ ಉಪ ನಿರೀಕ್ಷಕ ದೇವಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.