ಮೈಸೂರು: ಮೈಸೂರು – ನಂಜನಗೂಡು ರಸ್ತೆಯ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ಹುಲಿಗೆ ಕಾರು ಢಿಕ್ಕಿ ಹೊಡೆದು, ಹುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಸಾವನ್ನಪ್ಪಿದ ಹುಲಿಯ ವಯಸ್ಸು ಸುಮಾರು ಒಂದೂವರೆ ವರ್ಷ ಎಂದು ಹೇಳಲಾಗಿದ್ದು, ಅರಣ್ಯಾಧಿಕಾರಿಗಳು ಹುಲಿಯ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ.
ಸೋಮವಾರ ಬೆಳಗಿನ ಜಾವ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಾರು ಮೈಸೂರಿನಿಂದ ನಂಜನಗೂಡು ಕಡೆಗೆ ಸಂಚರಿಸುವ ವೇಳೆ ಒಂದು ಬದಿಯಿಂದ ಮತ್ತೊಂದು ಬದಿಗೆ ಹುಲಿ ದಾಟುತ್ತಿತ್ತು. ಈ ಸಂದರ್ಭ ಅವಘಡ ಸಂಭವಿಸಿದೆ.
ಮೈಸೂರಿನ ಹೊರವಲಯದಲ್ಲಿ ಆಗಾಗ ಕಾಣಸಿಗುತ್ತಿದ್ದ ನಾಲ್ಕು ಹುಲಿ ಮರಿಗಳಲ್ಲಿ ಇದು ಒಂದಾಗಿತ್ತು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಇದೀಗ ಕಾರನ್ನು ವಶಕ್ಕೆ ಪಡೆದುಕೊಂಡಿರುವ ಅರಣ್ಯಾಧಿಕಾರಿಗಳು, ತನಿಖೆ ಕೈಗೊಂಡಿದ್ದಾರೆ.