ಬೆಂಗಳೂರು: ಮುಂದಿನ ವಿಧಾನಪರಿಷತ್ ಉಪಚುನಾವಣೆ ಹಿನ್ನಲೆಯಲ್ಲಿ ವಿಧಾನಪರಿಷತ್ತಿನ ಉಳಿದ 6 ಸ್ಥಾನಗಳ ಚುನಾವಣೆಗೆ ಕುರಿತು ಈಗಾಗಲೇ ಚರ್ಚಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ಎಸ್.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಇಂದು ಮಾಧ್ಯಮದವರ ಜತೆ ಮಾತನಾಡಿದ ಅವರು, ಈಗಾಗಲೇ ಎಲ್ಲಾ ಕ್ಷೇತ್ರಗಳ ಕುರಿತು ಚರ್ಚೆಯಾಗಿದೆ. ಸಭೆಯಲ್ಲಿ ಚರ್ಚೆಯಾದ ಅಂಶಗಳನ್ನು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತಂದು ಶೀಘ್ರ ಅಭ್ಯರ್ಥಿಗಳ ಘೋಷಣೆ ಮಾಡಲು ನಿರ್ಧರಿಸಲಾಗಿದೆ ಎಂದ ಅವರು, ಕಾರ್ಯಕರ್ತರು ತಳಮಟ್ಟದಲ್ಲಿ ಹೊಂದಿಕೊಂಡು ಹೋಗುವ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಮುಂದಿನ ದಿನಗಳಲ್ಲಿ ವರಿಷ್ಠರು ಚರ್ಚೆ ನಡೆಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಡಿಎಸ್‍ನ ಕುಮಾರಸ್ವಾಮಿಯವರು ಸೇರಿ ವಿಧಾನಪರಿಷತ್ ಚುನಾವಣೆ ಸಂಬಂಧ ಚರ್ಚೆ ಮಾಡಿದ್ದೇವೆ. ಅಭ್ಯರ್ಥಿ ವಿಷಯದಲ್ಲಿ ಗೊಂದಲ ಇಲ್ಲ ಎಂದು ತಿಳಿಸಿದರು. ರಜೆ ಪ್ರಕಟಿಸಲು ಆಗ್ರಹ: ನಾಳೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸಾರ್ವಜನಿಕ ರಜೆ ಘೋಷಿಸಬೇಕು ಎಂದು ಅವರು ಆಗ್ರಹಿಸಿದರು. ಸಿದ್ದರಾಮಯ್ಯನವರು ಈಗಲಾದರೂ ಈ ಕುರಿತು ನಿರ್ಧಾರ ಮಾಡಬೇಕಿದೆ ಎಂದು ಅವರು ಒತ್ತಾಯಿಸಿದರು.