ಪುತ್ತೂರು : ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿಯ ನಡೆಯುವ ಹಿರೇಬಂಡಾಡಿ ತಿರುವು ರಸ್ತೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆ ಕುರಿತ ದೂರಿನ ಹಿನ್ನೆಲೆಯಲ್ಲಿ ಅಂಡರ್ ಪಾಸ್ ನಿರ್ಮಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಈ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಗೊಂದಲ ನಿವಾರಿಸಿದರು.
ಹಿರೇಬಂಡಾಡಿ ತಿರುವು ರಸ್ತೆಗೆ ಸಂಪರ್ಕ ಸಾಧಿಸುವ ಮತ್ತು ವಿದ್ಯಾರ್ಥಿಗಳ ಸುರಕ್ಷಿತ ಸಂಚಾರದ ಹಿನ್ನೆಲೆಯಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡುವ ಬಗ್ಗೆ ಮೂಡಿದ್ದ ಗೊಂದಲಗಳನ್ನು ಸಂಸದರ ಸೂಚನೆ ಮೇರೆಗೆ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ಗಳು ನಿಖರ ಮಾಹಿತಿ ನೀಡಿ ಗೊಂದಲಗಳನ್ನು ಬಗೆಹರಿಸಿದರು.
ಹೆದ್ದಾರಿ ಅಗಲೀಕರಣದ ಕಾರಣ ಉಪ್ಪಿನಂಗಡಿಯಲ್ಲಿ ಮೇಲು ಸೇತುವೆ ನಿರ್ಮಾಣದ ನೀಲ ನಕ್ಷೆ ಈ ಮೊದಲು ಸಿದ್ದವಾಗಿದ್ದರೂ, ಗುತ್ತಿಗೆದಾರರು ಬದಲಾದ ಬೆಳವಣಿಗೆಯಲ್ಲಿ ಮೇಲ್ ಸೇತುವೆಯ ಬದಲು ಎತ್ತರಿಸಿದ ರಸ್ತೆ ನಿರ್ಮಾಣವಾಗುವುದಾಗಿ ತಿಳಿಸಲಾಗಿತ್ತು. ಈ ವೇಳೆ ಅಂಡರ್ ಪಾಸ್ ರಸ್ತೆ ಎಲ್ಲೆಲ್ಲಾ ನಿರ್ಮಾಣವಾಗಲಿದೆ ಎನ್ನುವುದು ನಿಖರವಾಗಿ ಯಾರೂ ತಿಳಿಸದ ಕಾರಣದಿಂದ ಸಾರ್ವಜನಿಕರಲ್ಲಿ ಗೊಂದಲಗಳು ಉಂಟಾಗಿದ್ದವು.
ಈ ಬಗ್ಗೆ ಸಂದೇಹವನ್ನು ಬಗೆಹರಿಸುವ ಸಲುವಾಗಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ನಿಯೋಗ ಶುಕ್ರವಾರ ಮಂಗಳೂರಿನಲ್ಲಿ ಸಂಸದರನ್ನು ಭೇಟಿ ಮಾಡಿ ಹೆದ್ದಾರಿ ಅಗಲೀಕರಣದ ವೇಳೆ ಮೂಡಿರುವ ಗೊಂದಲಗಳನ್ನು ಬಗೆಹರಿಸಲು ಮನವಿ ಮಾಡಿದ್ದರು. ಸಂಸದರ ಸೂಚನೆ ಮೇರೆಗೆ ಶನಿವಾರ ಹೆದ್ದಾರಿ ಇಲಾಖಾ ಇಂಜಿನಿಯರ್ಗಳು ಭೇಟಿ ನೀಡಿ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿಯಲ್ಲಿ ಅಂಡರ್ ಪಾಸ್ ನಿರ್ಮಾಣ ಆಗುವ ಬಗ್ಗೆ ಮತ್ತು ಯಾವೆಲ್ಲಾ ಮತ್ತು ಸರ್ವೀಸ್ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶವಿರುತ್ತದೆ. ಹಾಗೂ ಎಲ್ಲೆಲ್ಲಾ ಚರಂಡಿ ವ್ಯವಸ್ಥೆಯನ್ನು ಪುನರ್ ನಿರ್ಮಿಸಲಾಗುತ್ತಿದೆ ಎಂದು ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ., ಗ್ರಾಮ ಪಂಚಾಯಿತಿ ಸದಸ್ಯರಾದ ಯು.ಟಿ. ತೌಶೀಫ್, ಧನಂಜಯ ಕುಮಾರ್, ಉಷಾ ಮುಳಿಯ, ಅಬ್ದುಲ್ ರಹಿಮಾನ್, ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿ’ಕೋಸ್ಟಾ, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್, ಹೆದ್ದಾರಿ ಇಲಾಖಾ ಇಂಜಿನಿಯರ್ ವಿವೇಕಾನಂದ, ಕಾಮಗಾರಿ ನಿರ್ವಹಣೆಯ ಕೆಎನ್ಆರ್. ಸಂಸ್ಥೆಯ ಇಂಜಿನಿಯರ್ ರಘುನಾಥ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.