ಪುತ್ತೂರು: ಖ್ಯಾತ ಗಾಯಕಿ ಕುಮಾರಿ ಸೂರ್ಯಗಾಯತ್ರಿ ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶನಿವಾರ ಸಂಜೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.
ಪುತ್ತೂರಿನಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಲು ಆಗಮಿಸಿದ ಹಿನ್ನಲೆಯಲ್ಲಿ ಶ್ರೀ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವರ ನಡೆಯಲ್ಲಿ ತನ್ನ ಸುಶ್ರಾವ್ಯ ಕಂಠದಿಂದ ಶಿವನನ್ನು ಸ್ತುತಿಸಿದರು.
ಶ್ರೀ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕುಮಾರ ಕೆದಿಲಾಯರು ವಿಶೇಷ ಪ್ರಾರ್ಥನೆ ಮಾಡಿ ಶ್ರೀ ದೇವರ ಪ್ರಸಾದ ನೀಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ ಅವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್, ಅರ್ಚಕರಾದ ಜಯರಾಮ ಜೋಯಿಸ, ಉದಯ ಕೃಷ್ಣ ಭಟ್, ಅಂಬಿಕಾ ವಿದ್ಯಾಸಂಸ್ಥೆಯ ಸುಬ್ರಹ್ಮಣ್ಯ ನಟ್ಟೋಜ, ಗಣೇಶ್ ಪ್ರಸಾದ್, ವೈಷ್ಣವೀ ಜೆ. ರಾವ್, ಸೂರ್ಯಗಾಯತ್ರಿ ಅವರ ತಂದೆ ಪಿ.ವಿ. ಅನಿಲ್ ಕುಮಾರ್, ತಾಯಿ ಪಿ.ಕೆ. ದಿವ್ಯ ಮೊದಲಾದವರು ಉಪಸ್ಥಿತರಿದ್ದರು.