ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎರಡು ದಿನಗಳ ಮಟ್ಟಿಗೆ ಹಿಂದೂಡಿದೆ. ಈ ಹಿಂದೆ ಏ.20 ಹಾಗೂ 21 ರಂದು ಪರೀಕ್ಷೆ ದಿನಾಂಕ ನಿಗದಿಯಾಗಿತ್ತು. ಇದೀಗ ಏ.18 ಮತ್ತು 19ರಂದು ಪರೀಕ್ಷೆಗಳು ನಡೆಯಲಿವೆ ಎಂದು ಪ್ರಕಟಣೆ ನೀಡಿದೆ. ಏ.21 ರಂದು ಎನ್ ಡಿಎ ಪರೀಕ್ಷೆ ನಡೆಯಲಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.
ವೃತ್ತಿಪರ ಕೋರ್ಸುಗಳಿಗೆ ಸೇರಲು ಬಯಸುವ ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ಜ.10 ರಿಂದ ಫೆ.10ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಬಿಪಿಟಿ, ಬಿಪಿಒ, ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳಿಗೆ ಸೇರಲು ಬಯಸುವ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.
ನೀಟ್ ಫಲಿತಾಂಶ ಪ್ರಕಟವಾದ ನಂತರ ಕೆಇಎಯಲ್ಲಿ ನೋಂದಾಯಿಸಿರುವ ಅಭ್ಯರ್ಥಿಗಳಿಗೆ ನೀಟ್ ಅಂಕ ಮತ್ತು ರೋಲ್ ನಂಬರ್ ದಾಖಲಿಸಲು ಇಂಟರ್ಫೇಸ್ ನೀಡಲಾಗುವುದು. ಸಿಇಟಿ ಪ್ರಕ್ರಿಯೆಯಲ್ಲಿ ಸುಧಾರಣೆ ತರುವ ಭಾಗವಾಗಿ ಈ ಬಾರಿ ಅರ್ಜಿಯನ್ನು ‘ಅರ್ಜಿ ಹಾಗೂ ಪರಿಶೀಲನೆ’ ನಮೂನೆಯಲ್ಲಿ ಹೊರತರಲಾಗಿದೆ. ಇದರಿಂದಾಗಿ, ಅಭ್ಯರ್ಥಿಗಳ ದಾಖಲಾತಿಗಳನ್ನು ಭೌತಿಕವಾಗಿ ಪರಿಶೀಲಿಸುವ ಸಮಯ ಉಳಿತಾಯವಾಗಲಿದೆ.