2024ರ ಸಾರ್ವತ್ರಿಕ ಚುನಾವಣೆಗಾಗಿ ಕಾಂಗ್ರೆಸ್ ತನ್ನ ‘ಸೆಂಟ್ರಲ್ ವಾರ್ ರೂಮ್’ ಅನ್ನು ರಚಿಸಿದೆ. ಇದರ ಅಧ್ಯಕ್ಷರಾಗಿ ಶಶಿಕಾಂತ್ ಸೆಂಥಿಲ್ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಮಾಡಿದ್ದಾರೆ.
2023ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ವಾರ್ ರೂಮ್ ಪಾತ್ರ ಪ್ರಮುಖವಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಮುಂದಿನ ಚುನಾವಣೆಗೆ ವಾರ್ ರೂಂ ತೆರೆಯಲಾಗಿದೆ. ಅಂದ ಹಾಗೇ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಬಳಿಕ ರಾಜೀನಾಮೆ ನೀಡಿದ್ದ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಅವರೇ ಸೆಂಟ್ರಲ್ ವಾರ್ ರೂಂನ ಮುಂದಾಳತ್ವ ವಹಿಸಿಕೊಳ್ಳಲಿದ್ದಾರೆ.
ಉಪಾಧ್ಯಕ್ಷರಾಗಿ ಗೋಕುಲ್ ಬುತೈಲ್, ನವೀನ್ ಶರ್ಮ, ವರುಣ್ ಸಂತೋಷ್, ಅರವಿಂದ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಸಂವಹನ ವಾರ್ ರೂಮ್ ಅಧ್ಯಕ್ಷರಾಗಿ ಆಗಿ ವೈಭವ್ ವಾಲಿಯಾರನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.