ಪುತ್ತೂರು: ದಿಗ್ಭಂಧನದಲ್ಲಿದ್ದ ಮಹಿಳೆಯೊಬ್ಬರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆಯವರು ಪೊಲೀಸರ ಸಹಕಾರದೊಂದಿಗೆ ರಕ್ಷಿಸಿ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವ ಕುರಿತು ವರದಿಯಾಗಿದೆ.
ಕೆಮ್ಮಿಂಜೆ ಗ್ರಾಮದ ಇಡಬೆಟ್ಟು ಸಮೀಪದ ಕರೆಜ್ಜ ಎಂಬಲ್ಲಿ ಮಹಿಳೆಯನ್ನು ರಕ್ಷಣೆ ಮಾಡಲಾಗಿದ್ದು, ಶ್ರೀಪತಿ ಹೆಬ್ಬಾರ್ ಎಂಬವರ ಪತ್ನಿ ಆಶಾ ಎಂಬವರನ್ನು ಮನೆಯ ಪಕ್ಕದ ಸಿಮೆಂಟ್ ಶೀಟ್ ಅಳವಡಿಸಿದ ಕಿಟಕಿ, ವಿದ್ಯುತ್ ಬೆಳಕು ಇಲ್ಲದ ಒಂದೇ ಬಾಗಿಲಿನ ಕೋಣೆಯಲ್ಲಿ ದಿಗ್ಭಂಧನದಲ್ಲಿರಿಸಲಾಗಿತ್ತು. ಅನಾಮಧೇಯ ಕರೆಯ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಮಹಿಳೆಯನ್ನು ದಿಗ್ಭಂಧನದಿಂದ ಮುಕ್ತಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಎದ್ದು ನಡೆಯಲಾಗದ, ಮಾತನಾಡದ ಪರಿಸ್ಥಿತಿಯಲ್ಲಿದ್ದ ಆಶಾ ಅವರನ್ನು ಸ್ನಾನ ಮಾಡಿಸಿ ಆಂಬುಲೆನ್ಸ್ಮೂಲಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೀಪತಿಯವರು ಅಂತರ್ಜಾತಿ ವಿವಾಹವಾಗಿ, ಆಶಾ ಅವರ ಪತ್ನಿಯಾಗಿದ್ದಾರೆ. ಅಧಿಕಾರಿಗಳು ಮಹಿಳೆಯನ್ನು ರಕ್ಷಿಸುವ ಸಂದರ್ಭ ಶ್ರೀಪತಿ ಹೆಬ್ಬಾರ್ ಮನೆಯಲ್ಲಿದ್ದ ಮಹಿಳೆಯನ್ನು ಮಾತನಾಡಿಸಿದಾಗ ದರ್ಪದಿಂದ ಉತ್ತರಿಸಿದ್ದಾರೆ ಎನ್ನಲಾಗಿದೆ. ಬಳಿಕ ಶ್ರೀಪತಿ ಹೆಬ್ಬಾರ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಕರೆ ಸ್ವೀಕರಿಸಿಲ್ಲ. ಈ ಕುರಿತು ಕೂಲಂಕುಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.