ಪುತ್ತೂರು: ಉದ್ಯಮಿ, ಸಹಕಾರಿ ಸವಣೂರು ಸೀತಾರಾಮ ರೈ ಅವರ ಅಳಿಯ ಅಶ್ವಿನ್ ಎಲ್. ಶೆಟ್ಟಿ ಜ.4 ರಂದು ಮಂಗಳೂರಿನಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ರಾಜಕೀಯ ಪ್ರವೇಶ ಮಾಡಲಿದ್ದಾರೆ.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬೆಳಿಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಸಂಸದ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ ಎಂದು ತಿಳಿದು ಬಂದಿದೆ.
ಅಶ್ವಿನ್ ಎಲ್. ಶೆಟ್ಟಿಯವರು ಜ.13 ರಂದು ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಜತೆಗೆ ರಾಷ್ಟ್ರಪ್ರೇಮವನ್ನು ಮೆಚ್ಚಿರುವುದಲ್ಲದೆ ಗ್ರಾಮೀಣ ಭಾಗದ ಜನತೆ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಿಜೆಪಿ ಸೇರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
2002 ರಿಂದ 2006 ರ ವರೆಗೆ ಫ್ರಾನ್ಸ್, ಜರ್ಮನಿ, ಸ್ಪೈನ್, ಚೀನಾ, ಆಸ್ಟ್ರೇಲಿಯಾದಲ್ಲಿ ಏರ್ ಬಸ್ ಸಂಸ್ಥೆಯಲ್ಲಿ ಟೆಕ್ನಿಕಲ್ ಮ್ಯಾನೇಜರ್ ಆಗಿ ಉದ್ಯೋಗದಲ್ಲಿದ್ದ ಅವರು, ಪ್ರಸ್ತುತ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.