ಸುಭದ್ರ ಸರಕಾರದ ಜತೆ ಸಮರ್ಥ ನಾಯಕ ದೇಶಕ್ಕೆ ಸಿಕ್ಕಿದ್ದಾರೆ | ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಸಂಜೀವ ಮಠಂದೂರು | ಕೇಂದ್ರ ಸರಕಾರದ ವಿವಿಧ ಯೋಜನೆಯ ಮಾಹಿತಿ

ಪುತ್ತೂರು: ಬ್ಯಾಂಕ್ ಹಾಗೂ ಸರಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿ ಮಾಡಿದ್ದಾರೆ. ಇದರೊಂದಿಗೆ ಎಲ್ಲರನ್ನು ಒಟ್ಟುಗೂಡಿಸಿ, ಸರ್ವರ ವಿಕಾಸದ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಂಗವಾಗಿ ಸೋಮವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಬ್ಯಾಂಕ್ ಆಫ್ ಬರೋಡಾ ಸಹಯೋಗದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನಸಾಮಾನ್ಯನಿಗೂ ಸ್ವಾಭಿಮಾನದ ಬದುಕು ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ ಎಂದ ಅವರು, ದೇಶ ಭದ್ರವಾಗಿದ್ದರೆ ಮಾತ್ರ ಪ್ರಜೆಗಳು ಸುಭದ್ರ. ಪ್ರಜೆಗಳು ನೆಮ್ಮದಿಯಿಂದ ಜೀವನ ಮಾಡಲು ಸುಭದ್ರ ಸರಕಾರದ ಜತೆಗೆ ಸಮರ್ಥ ನಾಯಕ ನಮ್ಮ ದೇಶಕ್ಕೆ ಸಿಕ್ಕಿದ್ದಾರೆ ಎಂದರು.





















































 
 

ವಿಶ್ವ ಹಿಂದೂ ಪರಿಷತ್‍ನ ಯು.ಪೂವಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರಕಾರದ ಯೋಜನೆಯನ್ನು ಪ್ರತಿಯೊಬ್ಬ ವ್ಯಕ್ತಿಗೂ ತಿಳಿಸಿದರೆ ಮಾತ್ರ ಪ್ರಯೋಜನ ಎಂದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿ ಕೇವಲ ಒಂದು ಪಕ್ಷಕ್ಕೆ ಮಾತ್ರ ಪ್ರಧಾನಿ ಅಲ್ಲ. ಬದಲಾಗಿ ಇಡೀ ದೇಶ ಪ್ರಧಾನಿ ಎಂದರು.

ಮುಖ್ಯ ಅತಿಥಿಯಾಗಿ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್ ಮಾತನಾಡಿ, ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಹಾಗಾಗಬೇಕಾದರೆ ಪ್ರತಿ ಮನೆಗೂ ಯೋಜನೆಯ ಮಾಹಿತಿ ತಲುಪಬೇಕು ಎಂದರು.

ಬ್ಯಾಂಕ್ ಆಫ್ ಬರೋಡದ ಶಾಖಾ ವ್ಯವಸ್ಥಾಪಕಿ ಅರುಣಾ ದೀಪ್ತಿ ಮಾತನಾಡಿ, ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಅದು ಪ್ರತಿಯೊಬ್ಬರಿಗೂ ತಲುಪುತ್ತಿಲ್ಲ. ಆದ್ದರಿಂದ ಮಾಹಿತಿ ನೀಡುವ ದಿಶೆಯಲ್ಲಿ ಇದೊಂದು ಪ್ರಯತ್ನವಷ್ಟೇ. ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕಾದರೆ ಬ್ಯಾಂಕ್ ಆಫ್ ಬರೋಡಾದ ಕಚೇರಿಗೆ ಭೇಟಿ ನೀಡಿ ಎಂದರು.

ಮುದ್ರಾ ಯೋಜನೆಯ ಫಲಾನುಭವಿಗಳಾದ ಪ್ರಿಯಾ ನವೀನ್, ಇಬ್ರಾಹಿಂ, ಭವ್ಯ ಅವರನ್ನು ಗೌರವಿಸಲಾಯಿತು. ಬ್ಯಾಂಕ್‍ ಆಫ್ ಬರೋಡಾದ ಎಫ್‍.ಎಸ್‍.ಸಿ. ಗೀತಾ ವಿಜಯ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್‍ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕ್‍ ಆಫ್ ಬರೋಡಾದ ಅಸಿಸ್ಟೆಂಟ್ ಮ್ಯಾನೇಜರ್ ಪ್ರವೀಣ್ ವಂದಿಸಿದರು.

ಫಸಲ್ ಬಿಮಾ ಯೋಜನೆ, ಮುದ್ರಾ ಯೋಜನೆ, ಉಜ್ವಲ ಯೋಜನೆ ಸೇರಿದಂತೆ ಹಲವಾರು ಯೋಜನೆಯ ಕುರಿತು ಮಾಹಿತಿ ನೀಡಲಾಯಿತು. ವಿದುಷಿ ನಯನಾ ವಿ. ರೈ ಕುದ್ಕಾಡಿ ಅವರ ಶಿಷ್ಯಂದಿರಿಂದ ಭರತನಾಟ್ಯ ಪ್ರದರ್ಶನಗೊಂಡಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top