ಉಪ್ಪಿನಂಗಡಿ : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿ ನಿಲ್ಲಿಸಲಾಗಿದ್ದ ಲಾರಿಯೊಂದರಲ್ಲಿ ಮೃತದೇಹವೊಂದು ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೈಸೂರು ಜಿಲ್ಲೆಯ ಚೆನ್ನಪಟ್ಟಣದ ಖಲೀಲ್ ಖಾನ್ (58) ಮೃತಪಟ್ಟ ವ್ಯಕ್ತಿ.
ಈ ಘಟನೆ ಎರಡು ದಿನಗಳ ಬಳಿಕ ಬೆಳಕಿಗೆ ಬಂದಿದ್ದು, ಮೈಸೂರಿನಿಂದ ಬಿ.ಸಿ.ರೋಡಿಗೆ ಹಾಸಿಗೆ ಲೋಡನ್ನು ಲಾರಿಯಲ್ಲಿ ತಂದು ಖಾಲಿ ಮಾಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಲಾರಿಯನ್ನು ನಿಲ್ಲಿಸಲಾಗಿತ್ತು. ಲಾರಿಯ ಬಾಗಿಲು ಚಿಲಕ ಹಾಕಿದ್ದರಿಂದ ಘಟನೆ ತಿಳಿದು ಬಂದಿಲ್ಲ.
ಡಿ.29 ರಂದು ಲಾರಿಯಿಂದ ವಾಸನೆ ಬರಲಾರಂಭಿಸಿದ್ದು, ಸಂಶಯಗೊಂಡು ಸ್ಥಳೀಯರು ಪರಿಶೀಲನೆ ಮಾಡಿದಾಗ ಮಲಗಿದಲ್ಲೇ ಮೃತಪಟ್ಟ ರೀತಿಯಲ್ಲಿ ಕಂಡು ಬಂದಿದ್ದು, ಹೃದಯಾಘಾತವಾಗಿರಬಹುದು ಎನ್ನಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
























