ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಹಾಗೂ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಕಲಾ ಸಂಘದ ಆಶ್ರಯದಲ್ಲಿ ‘ಶ್ರೀ ಆಂಜನೇಯ-55”, ಶ್ರೀ ಯಕ್ಷಾಂಜನೇಯ ಪ್ರಶಸ್ತಿ ಪ್ರದಾನ ಹಾಗೂ ಶ್ರೀ ಆಂಜನೇಯ 55 ರ ಗೌರವ ಕಾರ್ಯಕ್ರಮ ಡಿ.23 ಶನಿವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೀ ಆಂಜನೇಯ 55 ರ ಹಿನ್ನಲೆಯಲ್ಲಿ ಐದು ಕಾರ್ಯಕ್ರಮಗಳನ್ನು ಅಂದು ಹಮ್ಮಿಕೊಳ್ಳಲಾಗಿದೆ. ಶಾಸ್ತ್ರೀಯ ಸಂಗೀತ, ಹನುಮಾನ್ ಚಾಲಿಸ್ ತಾಳಮದ್ದಳೆ, ಶರಸೇತು ಹರಿಕಥಾ ಕಾಲಕ್ಷೇಪ ಹಾಗೂ ಭರತ ನಾಟ್ಯ ಹೀಗೆ ಐದು ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.
ಬೆಳಿಗ್ಗೆ 9.30 ಕ್ಕೆ ಕಾರ್ಯಕ್ರಮವನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಸಾದ್ವಿ ಶ್ರೀ ಮಾತಾನಂದಮಯಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಉಪಸ್ಥಿತರಿರುವರು. ಸಂಜೆ 5 ಗಂಟೆಗೆ ನಡೆಯುವ ಸಭಾ ಕಲಾಪದಲ್ಲಿ ಹಿರಿಯ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ ಅವರಿಗೆ ಶ್ರೀ ಯಕ್ಷಾಂಜನೇಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅರ್ಥಧಾರಿ ಜಬ್ಬಾರ್ ಸಮೋ ಅವರಿಗೆ ಶ್ರೀ ಆಂಜನೇಯ 55 ರ ಗೌರವಾರ್ಪಣೆ ನಡೆಯಲಿದೆ. ಬಳಿಕ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದಂಗಳವರು ಆಶೀರ್ವಚನ ನೀಡುವರು. ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಉದ್ಯಮಿ ಗೋಪಾಲಕೃಷ್ಣ ಭಟ್ ಭಾಗವಹಿಸಲಿದ್ದು, ಕಲ್ಲಮ ಶ್ರೀ ರಾಘವೇಂದ್ರ ಮಠದ ಕೆ.ಸೀತಾರಾಮ ಭಟ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸದಸ್ಯೆ ವೀಣಾ ಬಿ.ಕೆ. ಶುಭಾಶಂಸನೆ ಮಾಡುವರು. ಡಾ.ವಿದ್ವಾನ್ ವಿನಾಯಕ ಭಟ್ ಗಾಳಿಮನೆ ಅಭಿನಂದನಾ ಮಾತುಗಳನ್ನಾಡುವರು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕೋಶಾಧಿಕಾರಿ ದುಗ್ಗಪ್ಪ ಎನ್., ಗೌರವ ಕಾರ್ಯದರ್ಶಿ ಟಿ.ರಂಗನಾಥ ರಾವ್, ಕಾರ್ಯದರ್ಶಿ ಆನಂದ ಸವಣೂರು, ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮಲತಾ ಟಿ. ರಾವ್, ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ ಉಪಸ್ಥಿತರಿದ್ದರು.