ಬೆಳಗಾವಿ: ಒಂದೆಡೆ ರಾಜ್ಯದ ಸಮಸ್ಯೆಗಳ ಚರ್ಚೆಗಾಗಿ ಬೆಳಗಾವಿ ಅಧಿವೇಶನ ನಡೆಯುತ್ತಿದ್ದರೆ, ಅದೇ ಅಧಿವೇಶನ ನಡೆಯುತ್ತಿರುವ ಸೌಧದ ಹೊರಗಡೆ ರಾಜ್ಯವೇ ತಲೆತಗ್ಗಿಸುವ ಘಟನೆಯೊಂದು ನಡೆದಿದೆ.
ಯುವಕನೊಬ್ಬ ಪ್ರೀತಿಸಿದ ಯುವತಿ ಜತೆಗೆ ಓಡಿ ಹೋಗಿದ್ದ. ಇದರಿಂದ ಆಕ್ರೋಶಗೊಂಡು ಯುವತಿ ಸಂಬಂಧಿಕರು, ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿಹಾಕಿ, ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಅಮಾನವೀಯ ಘಟನೆಗೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮ ಸಾಕ್ಷಿಯಾಗಿದೆ.
ವಂಟಮೂರಿ ಗ್ರಾಮದ ನಿವಾಸಿ ದುಂಡಪ್ಪ ಅಶೋಕ ನಾಯಕ್ ಟ್ರಕ್ ಡೈವರ್ ಆಗಿದ್ದಾನೆ. ಈತನ ತಾಯಿ ಕಮಲವ್ವ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಕಮಲವ್ವ ಮಗ ದುಂಡಪ್ಪ, ಪ್ರಿಯಾಂಕಾ ಬಸಪ್ಪ ನಾಯಕ್ ಎಂಬಾಕೆಯನ್ನು ಪ್ರೀತಿಸಿದ್ದ. ಕಳೆದ ಎರಡು ವರ್ಷದಿಂದ ಒಬ್ಬರಿಗೊಬ್ಬರು ಪ್ರೀತಿ ಮಾಡುತ್ತಿದ್ದರು. ಸೋಮವಾರ ಪ್ರಿಯಾಂಕಾ ಕುಟುಂಬಸ್ಥರು ಯಾದಿ ಮೇ ಶಾದಿ (ನಿಶ್ಚಿತಾರ್ಥ) ಮಾಡಲು ನಿರ್ಧರಿಸಿದ್ದರು. ಈ ವಿಚಾರ ತಿಳಿದ ಪ್ರೇಮಿಗಳು ಓಡಿ ಹೋಗಲು ನಿರ್ಧರಿಸಿದ್ದರು.
ಮಧ್ಯರಾತ್ರಿ ಪ್ರಿಯಾಂಕಾ ಕರೆದುಕೊಂಡು ದುಂಡಪ್ಪ ಓಡಿ ಹೋಗಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಮನೆಯವರು ದುಂಡಪ್ಪನ ಮನೆಗೆ ಬಂದು, ಮನೆಯ ಬಾಗಿಲು ಒಡೆದು ಒಳ ಪ್ರವೇಶಿಸಿ ತಾಯಿಯ ಮೇಲೆ ಮೃಗೀಯ ವರ್ತನೆ ತೋರಿದ್ದಾರೆ. ಮಾತ್ರವಲ್ಲ ಮನೆಯಲ್ಲಿದ್ದ ವಸ್ತುಗಳನ್ನು ಹಾಳು ಮಾಡಿ ಹೋಗಿದ್ದಾರೆ.
ರಾತ್ರೋ ರಾತ್ರಿ ಬೀಗ ಮುರಿದು ಯುವಕನ ಮನೆಗೆ ನುಗ್ಗಿ ಕಲ್ಲು ತೂರಿ ಇಡೀ ಮನೆ ಧ್ವಂಸ ಮಾಡಿರುವ ಕ್ರೂರಿಗಳು, ಬಳಿಕ ಮಲಗಿದ್ದ ಯುವಕನ ತಾಯಿ ಕಮಲವ್ವನ ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ದಾರೆ. ಬಳಿಕ ಮೆರವಣಿಗೆ ನಡೆಸಿ ಕಂಬಕ್ಕೆ ಕಟ್ಟಿ ಹಾಕಿ ಮತ್ತೆ ಹಲ್ಲೆ ಮಾಡಿದ್ದಾರೆ. ಮಹಿಳೆಯರು ಸೇರಿ ಒಟ್ಟು ಒಂಬತ್ತು ಮಂದಿ ತಾಯಿಯ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಪ್ರಕರಣ ಸಂಬಂಧ ಮಹಿಳೆಯರು ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಸಿದ್ದರಾಮಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವವರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಮಹಿಳೆ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಡೀ ಗ್ರಾಮದಲ್ಲಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.
ಆಸ್ಪತ್ರೆಗೆ ಗೃಹಸಚಿವ ಭೇಟಿ
ಕಮಲವ್ವ ಅವರನ್ನು ದಾಖಲು ಮಾಡಲಾಗಿರುವ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಹಲ್ಲೆಗೊಳಗಾದ ಸಂತ್ರಸ್ತೆಯಿಂದ ಘಟನೆಯ ಕುರಿತು ಮಾಹಿತಿ ಪಡೆದರು.