ಕರ್ನಾಟಕ ಸೇರಿದಂತೆ ದೇಶದ 44 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಶನಿವಾರ ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿ ಶಂಕಿತ ಐಸಿಸ್ ಉಗ್ರನೊಬ್ಬನನ್ನು ಬಂಧಿಸಿದೆ.
ಬೆಂಗಳೂರಿನ ಪುಲಿಕೇಶಿನಗರ ವ್ಯಾಪ್ತಿಯಲ್ಲಿ ವಾಸವಾಗಿದ್ದ ಆಲಿ ಅಬ್ಬಾಸ್ ಪೇಟಿವಾಲ ಎಂಬಾತನನ್ನು ಎನ್‌ಐಎ ವಶಕ್ಕೆ ಪಡೆದಿದೆ. ಮೂಲತಃ ಮುಂಬೈ ಮೂಲದ ಆಲಿ ಅಬ್ಬಾಸ್ ಪೇಟಿವಾಲ, ಪುಲಿಕೇಶಿನಗರ ವ್ಯಾಪ್ತಿಯಲ್ಲಿ ಉರ್ದು ಶಾಲೆ ನಡೆಸುತ್ತಿದ್ದ ಎಂದು ಗೊತ್ತಾಗಿದೆ. ಎನ್‌ಐಎ ಈತನನ್ನು ವಶಕ್ಕೆ ಪಡೆದು ಕರೆದೊಯ್ದಿದ್ದು, ಹೆಚ್ಚಿನ ವಿವರಗಳು ದೊರೆಯಬೇಕಿದೆ.
ದೇಶಾದ್ಯಂತ ಭಯೋತ್ಪಾದಕ ದಾಳಿ ನಡೆಸಲು ಜಾಗತಿಕ ಭಯೋತ್ಪಾದಕ ಗುಂಪು ಐಸಿಸ್ ಸಂಚು ರೂಪಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕರ್ನಾಟಕ ಮತ್ತು ಮಹಾರಾಷ್ಟ್ರದ ಸುಮಾರು 44 ಸ್ಥಳಗಳಲ್ಲಿ ಶನಿವಾರ ಮುಂಜಾನೆ ದಾಳಿ ನಡೆಸಿತ್ತು. ಕರ್ನಾಟಕದಲ್ಲಿ ಒಬ್ಬಾತ ಸೇರಿದಂತೆ 14 ಮಂದಿಯನ್ನು ಎನ್‌ಐಎ ವಶಕ್ಕೆ ತೆಗೆದುಕೊಂಡಿದೆ.
2020ರಲ್ಲಿ ಕೂಡ ಎನ್‌ಐಎ ನಡೆಸಿದ ಇಂಥದೇ ಕಾರ್ಯಾಚರಣೆಯೊಂದರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ನೇತ್ರ ತಜ್ಞನಾಗಿದ್ದ ಅಬ್ದುರ್ ರಮಾನ್ ಎಂಬಾತ ಐಸಿಸ್ ಪರವಾಗಿ ಕಾರ್ಯಾಚರಿಸುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು.
ಕರ್ನಾಟಕದಲ್ಲಿ ಒಂದುಕಡೆ, ಪುಣೆಯಲ್ಲಿ 2 ಕಡೆ, ಠಾಣೆ ಗ್ರಾಮೀಣದಲ್ಲಿ 31 ಕಡೆ, ಠಾಣೆ ನಗರದಲ್ಲಿ 9 ಕಡೆ ಮತ್ತು ಭಯಂದರ್ನಲ್ಲಿ ಒಂದು ಕಡೆ ಎನ್ಐಎ ಅಧಿಕಾರಿಗಳು ಶೋಧನೆ ನಡೆಸುತ್ತಿದ್ದಾರೆ. ‘ಭಾರತದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುವ ಭಯೋತ್ಪಾದಕ ಸಂಘಟನೆಯ ಯೋಜನೆಗಳನ್ನು ವಿಫಲಗೊಳಿಸಲು ಎನ್ಐಎ ವ್ಯಾಪಕ ತನಿಖೆ ನಡೆಸುತ್ತಿದೆʼ ಎಂದು ಹೇಳಲಾಗಿದೆ.
























