ಬೆಂಗಳೂರು: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರ ಭಾವನ ಮೃತದೇಹ ಪತ್ತೆಯಾಗಿದೆ.
ರಾಮಾಪುರದ ನಿರ್ಜನ ಪ್ರದೇಶದಲ್ಲಿ ಶವ ಪತ್ತೆಯಾಗಿದ್ದು, ಕೊಲೆಯಾದ ಸ್ಥಿತಿಯಲ್ಲಿದೆ ಎಂದು ಹೇಳಲಾಗಿದೆ.
ಮೇಲ್ಮನೆ ಸದಸ್ಯ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಭಾವ ಮಹದೇವಯ್ಯ ಅವರು ಚಕ್ಕೆರೆ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಶನಿವಾರ ನಾಪತ್ತೆಯಾಗಿದ್ದರು. ಅಪಹರಣದ ಶಂಕೆಯೂ ವ್ಯಕ್ತವಾಗಿತ್ತು.
62ರ ಹರೆಯದ ಮಹದೇವಯ್ಯ ಅವರು ಯೋಗೇಶ್ವರ ಸಹೋದರಿಯ ಪತಿ. ಮಹದೇವಯ್ಯ ಅವರ ಪತ್ನಿ ಬೆಂಗಳೂರಿಗೆ ಹೋಗಿದ್ದರಿಂದ ಮನೆಯಲ್ಲಿ ಅವರೊಬ್ಬರೇ ಇದ್ದರು. ಶನಿವಾರ ಬೆಳಗ್ಗೆ ಮಹದೇಶ್ವರ ಬೆಟ್ಟದ ಮೇಲೆ ಮೊಬೈಲ್ ಲೊಕೇಶನ್ ತೋರಿಸಿದ್ದು, ನಂತರ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ. ಮಧ್ಯಾಹ್ನ ಸ್ಥಳೀಯರು ಮನೆಗೆ ಹೋಗಿ ನೋಡಿದಾಗ, ಯಾರೋ ಅವರನ್ನು ಅಪಹರಿಸಿ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣ ದೋಚಿರುವ ಅನುಮಾನ ವ್ಯಕ್ತವಾಗಿದೆ. ಕೂಡಲೇ ಕುಟುಂಬದವರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು, ಮಹದೇವಯ್ಯ ಅವರ ಮೊಬೈಲ್ ಪದೇ ಪದೇ ಆನ್ ಅಂಡ್ ಆಫ್ ಆಗುತ್ತಿತ್ತು. ಇದರ ಜಾಡು ಹಿಡಿದ ಪೊಲೀಸರು, ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಮಾತ್ರವಲ್ಲ, ಸಿಸಿಟಿವಿ ದೃಶ್ಯಾವಳಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ಮೂವರು ವ್ಯಕ್ತಿಗಳು ಅಪಹರಣ ನಡೆಸಿರುವಂತೆ ಕಂಡುಬರುತ್ತಿತ್ತು ಎನ್ನಲಾಗಿದೆ.