ಬಂಟ್ವಾಳ: ಬಂಟ್ವಾಳದಲ್ಲಿ ಅಕ್ಕ-ಪಕ್ಕದ ಮನೆಯಿಂದ ಕಾಣೆಯಾದ ಯುವಕ- ಯುವತಿ ಕೇರಳದ ಕಾಂಞಗಾಡ್ ನಲ್ಲಿ ಪೋಲೀಸರು ಪತ್ತೆಹಚ್ಚಿದ್ದು, ಇಬ್ಬರನ್ನು ವಾಪಾಸು ಕರೆದುಕೊಂಡು ಬಂದಿದ್ದಾರೆ.
ನ.24 ರಂದು ಮುಂಜಾನೆ ಮನೆಯವರಿಗೆ ಗೊತ್ತಿಲ್ಲದಂತೆ ಪರಾರಿಯಾಗಿದ್ದ ಈ ಯುವಜೋಡಿ ಕೇರಳ ರಾಜ್ಯದ ಕಾಂಞಗಾಡ್ ಎಂಬಲ್ಲಿ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಸಜೀಪ ಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿ ಅಬ್ದುಲ್ ಹಮೀದ್ ಅವರ ಮಗಳು ಆಯಿಸತ್ ರಸ್ಮಾ (18) ಹಾಗೂ ಹೈದರ್ ಎಂಬವರ ಮಗ ಮಹಮ್ಮದ್ ಸಿನಾನ್ (23) ಕಾಣೆಯಾಗಿರುವ ಜೋಡಿಯಾಗಿದ್ದರು. ಆಸ್ಮಾ ಅವರು ದೇರಳಕಟ್ಟೆ ನಡುಪದವು ಪಿ.ಎ.ಕಾಲೇಜಿನಲ್ಲಿ ಫಾರ್ಮಸಿ ವಿಭಾಗದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಸಿನಾನ್ ಕೆಲ ವರ್ಷಗಳಿಂದ ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಇತ್ತೀಚಿಗೆ ಊರಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದ ದೂರಿನಲ್ಲಿ ತಿಳಿಸಲಾಗಿತ್ತು. ಇವರು ಇಬ್ಬರು ಒಂದೇ ದಿನ ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಹುಡುಕಿಕೊಡುವಂತೆ ದೂರಿನಲ್ಲಿ ತಿಳಿಸಲಾಗಿತ್ತು. ಆದರೆ ಎರಡು ಮನೆಯವರಿಗೆ ಇವರ ಮಧ್ಯೆ ಪ್ರೇಮದ ವಿಚಾರ ತಿಳಿದಿತ್ತು ಎನ್ನಲಾಗಿದೆ. ಈ ವಿಚಾರದ ಬಗ್ಗೆ ತಿಳಿದ ಪೋಲೀಸರು ಕಾಣೆಯಾದವರ ಬಗ್ಗೆ ಮಾಹಿತಿ ಕಲೆಹಾಕಿ ಕಾಂಞಗಾಡ್ ನಲ್ಲಿ ಪತ್ತೆ ಮಾಡಿದ್ದಾರೆ.
ಯುವಕ ಮತ್ತು ಯುವತಿಯ ಮನೆಯವರನ್ನು ಠಾಣೆಗೆ ಕರೆಸಿದ ಪೋಲೀಸರು, ಮನೆಯವರೊಂದಿಗೆ ತೆರಳುವಂತೆ ತಿಳಿಸಿದಾಗ ಯುವತಿ ನಾನು ಯುವಕನೊಂದಿಗೆ ಹೋಗುವುದಾಗಿ ತಿಳಿಸಿದ್ದಾಳೆ. ನಾನು ಅವನನ್ನು ಪ್ರೀತಿಸುತ್ತಿದ್ದು, ಇಬ್ಬರು ಮದುವೆಯಾಗುತ್ತೇವೆ. ಹಾಗಾಗಿ ಅವನ ಜೊತೆ ಹೋಗುವುದಾಗಿ ತಿಳಿಸಿದ್ದಾಳೆ ಎಂದು ಪೋಲೀಸರು ತಿಳಿಸಿದ್ದಾರೆ.