ಆಲ್ಫ್ರೆಡ್ ನೊಬೆಲ್, ತಪ್ಪಿತಸ್ಥ ಮನೋಭಾವ ಮತ್ತು ನೊಬೆಲ್ ಪ್ರಶಸ್ತಿ

ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿ ಹುಟ್ಟಿಕೊಂಡ ರೋಚಕ ಕಥೆ

1888ರ ಡಿಸೆಂಬರ್ ತಿಂಗಳ ಒಂದು ಮುಂಜಾನೆ.
ಸ್ವೀಡನ್ ದೇಶದ ಸ್ಟಾಕಹೋಂ ನಗರದ ಹೃದಯ ಭಾಗದಲ್ಲಿರುವ ಒಂದು ದೊಡ್ಡ ಅರಮನೆಯಂತಹ ಮನೆಯ ಪಡಸಾಲೆಯಲ್ಲಿ ಒಬ್ಬ ವಿಜ್ಞಾನಿ ಕುಳಿತು ಅಂದಿನ ಪತ್ರಿಕೆಯ ಮೇಲೆ ಕಣ್ಣು ನೆಟ್ಟಿದ್ದ. ಅದರಲ್ಲಿ ಇದ್ದ ಒಂದು ಹೆಡ್‌ಲೈನ್ ನ್ಯೂಸ್ ಥಟ್ಟನೆ ಅವನ ಗಮನವನ್ನು ಸೆಳೆಯಿತು.
ಅದರಲ್ಲಿ ಇದ್ದ ಶೀರ್ಷಿಕೆ – ಮರಣದ ವ್ಯಾಪಾರಿ ಇನ್ನಿಲ್ಲ! ಆತ ಕುತೂಹಲದಿಂದ ಮುಂದೆ ಓದುತ್ತಾ ಹೋದಂತೆ ಬೆಚ್ಚಿ ಬಿದ್ದ.
ಆ ಪತ್ರಿಕೆ ಅದೇ ವಿಜ್ಞಾನಿ ಸತ್ತು ಹೋಗಿದ್ದಾನೆ ಎಂಬ ಸುದ್ದಿಯನ್ನು ಪ್ರಕಟಿಸಿ ಅವನಿಗೆ ಶ್ರದ್ಧಾಂಜಲಿ ಅರ್ಪಿಸಿತ್ತು. ಆತ ತನ್ನ ಕೈಯನ್ನು ತಾನೇ ಚಿವುಟಿ ಕೊಂಡನು. ತಾನು ಬದುಕಿದ್ದೇನೆ ಎಂದು ಖಾತರಿ ಆಯಿತು. ಇನ್ನು ಪತ್ರಿಕಾ ಕಚೇರಿಗೆ ಫೋನ್ ಮಾಡಿ ತಾನು ಬದುಕಿದ್ದೇನೆ ಎಂದು ತಿಳಿಸಲು ಕ್ರೆಡಲ್ ಬಳಿಗೆ ಹೋದನು. ಅಷ್ಟರಲ್ಲಿ ನನ್ನ ಬಗ್ಗೆ ಏನು ಬರೆದಿದ್ದಾರೆ ನೋಡೆ ಬಿಡುವ ಎಂಬ ಯೋಚನೆ ಮನಸಿಗೆ ಬಂದಿತು. ಆತ ತನ್ನ ಶ್ರದ್ಧಾಂಜಲಿ ಲೇಖನ ಓದಲು ಶುರು ಮಾಡಿದ. ಅವನಿಗೆ ಎರಡನೇ ಬಾರಿಗೆ ಶಾಕ್ ಆಯಿತು.
ಆತ ಡೈನಮೆಟ್ ಕಂಡು ಹಿಡಿದು ಅದನ್ನು ದೊಡ್ಡ ದೊಡ್ಡ ಗಣಿಗಾರಿಕೆಯ ಕಂಪೆನಿಗಳಿಗೆ ಮಾರಾಟ ಮಾಡಿ ಕೋಟಿ ಕೋಟಿ ಪೌಂಡ್ ಸಂಪಾದನೆ ಮಾಡಿದ್ದಾನೆ. ಆತ ಮಾನವೀಯತೆಗೆ ಕಳಂಕ. ಆತ ಮರಣವನ್ನು ಜಗತ್ತಿಗೆ ಹಂಚಿದ್ದಾನೆ ಎಂದು ಪತ್ರಿಕೆ ಬರೆದಿತ್ತು. ಈಗ ಆ ವಿಜ್ಞಾನಿಯು ಕುಸಿದು ಬಿದ್ದು ಯೋಚನೆ ಆರಂಭ ಮಾಡಿದ.
ಆತನ ಹೆಸರು ಸರ್ ಆಲ್ಫ್ರೆಡ್ ನೊಬೆಲ್!
ಆತ ರಸಾಯನ ಶಾಸ್ತ್ರದಲ್ಲಿ ಸಂಶೋಧನೆ ಮಾಡಿ ಆ ಕಾಲಕ್ಕೆ 355 ಪೇಟೆಂಟ್ ಪಡೆದಿದ್ದ. ಆತನ ಸಂಶೋಧನೆಯ ಪ್ರತಿಭೆಗೆ ಬೆಲೆ ಕಟ್ಟಲು ಸಾಧ್ಯವೇ ಇರಲಿಲ್ಲ. ಆತ ಕಂಡು ಹಿಡಿದ ನೈಟ್ರೋ ಗ್ಲಿಸೇರಿನ್ ಮತ್ತು ಡೈನಮೆಟ್ ಎಂಬ ರಾಸಾಯನಿಕ ವಸ್ತುಗಳು ಆ ಕಾಲದಲ್ಲಿ ಜನಪ್ರಿಯತೆ ಪಡೆದಿದ್ದವು.
ಅವೆರಡೂ ಬಂಡೆ ಒಡೆಯುವ ಸ್ಫೋಟಕ ವಸ್ತುಗಳು. ಅವುಗಳನ್ನು ಗಣಿಗಾರಿಕೆಯ ಕಂಪೆನಿಗಳಿಗೆ ಮಾರಾಟ ಮಾಡಿ ಆತ ರಾಶಿ ರಾಶಿ ದುಡ್ಡು ಸಂಪಾದನೆ ಮಾಡಿದ್ದ. ಸ್ಟಾಕ್ ಹೋಮ್ ನಗರದಲ್ಲಿ ಆತ ಅತ್ಯಂತ ಶ್ರೀಮಂತ ವ್ಯಕ್ತಿ ಆಗಿದ್ದ. ಆತನನ್ನು ಮರಣದ ವ್ಯಾಪಾರಿ, ಯುದ್ಧ ಉನ್ಮಾದದ ಪ್ರೇರಕ ಶಕ್ತಿ ಎಂದು ಪತ್ರಿಕೆ ಬರೆದಿತ್ತು. ನಿಜವಾಗಿ ಏನಾಗಿತ್ತು ಅಂದರೆ ಹಿಂದಿನ ದಿನ ಆತನ ಸಹೋದರ ಲುಡ್ವಿಗ್ ನೊಬೆಲ್ ತೀರಿ ಹೋಗಿದ್ದ. ಪತ್ರಿಕೆಯು ಗೊಂದಲದಲ್ಲಿ ಆತನ ಬದಲು ಈತನಿಗೆ ಶ್ರದ್ಧಾಂಜಲಿ ಅರ್ಪಿಸಿತ್ತು.
ಈ ಘಟನೆ ಆತನ ಕಣ್ಣು ತೆರೆಸಿತ್ತು. ತಾನು ಮಹಾನ್ ವಿಜ್ಞಾನಿ ಎಂಬ ಭ್ರಮೆಯ ಪೊರೆ ಕಳಚಿ ಹೋಗಿತ್ತು. ಸತ್ತ ನಂತರ ತನ್ನನ್ನು ಜಗತ್ತು ಹೀಗೆಲ್ಲ ನೆನಪು ಮಾಡುತ್ತದೆ ಎಂಬ ವಿಷಯವು ಅವನನ್ನು ಅಲ್ಲಾಡಿಸಿ ಬಿಟ್ಟಿತ್ತು.
ಆತನು ತಪ್ಪಿತಸ್ಥ ಭಾವನೆಯಿಂದ ಆತ್ಮಾವಲೋಕನಕ್ಕೆ ಇಳಿದ. ತನ್ನ ಪಾಪಗಳನ್ನು ತೊಳೆಯಲು ಏನೇನು ಮಾಡಬಹುದು ಎಂದು ತುಂಬಾ ಆಳವಾಗಿ ಯೋಚನೆ ಮಾಡಿದನು. ತನ್ನ ವಕೀಲರನ್ನು ಮನೆಗೆ ಕರೆದು ಅದಕ್ಕೆ ಅನುಗುಣವಾಗಿ ವೀಲುನಾಮೆಯನ್ನು ಬರೆಸಿದ. ತನ್ನ ಒಟ್ಟು ಆಸ್ತಿಯ 94% ಭಾಗವನ್ನು (ಅಂದಾಜು 17 ಲಕ್ಷ ಪೌಂಡ್) ಹೂಡಿಕೆ ಮಾಡಿ ಒಂದು ಟ್ರಸ್ಟನ್ನು ಸ್ಥಾಪನೆ ಮಾಡಿದ. ಅದರ ಬಡ್ಡಿಯಿಂದ ಬಂದ ಬೃಹತ್ ಮೊತ್ತದ ಜತೆಗೆ ಪ್ರತಿ ವರ್ಷ ಜಾಗತಿಕ ಮಟ್ಟದಲ್ಲಿ ಒಂದು ಪ್ರಶಸ್ತಿಯನ್ನು ಕೊಡಬೇಕು ಎಂದು ತಾಕೀತು ಮಾಡಿದ. ಮಾನವ ಸಮುದಾಯಕ್ಕೇ ಅತಿ ದೊಡ್ಡ ಲಾಭವನ್ನು ಉಂಟುಮಾಡಿದ ಒಬ್ಬ ವ್ಯಕ್ತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲು ನಿರ್ದೇಶನ ನೀಡಿದ.
ಆಗ ಹುಟ್ಟಿದ ಈ ಜಾಗತಿಕ ಪ್ರಶಸ್ತಿಯೇ ನೊಬೆಲ್ ಪ್ರಶಸ್ತಿ! ಆರಂಭದಲ್ಲಿ ಒಬ್ಬರಿಗೆ ಮಾತ್ರ ಈ ಪ್ರಶಸ್ತಿಯು ದೊರೆಯುತ್ತಿದ್ದು ಮುಂದೆ ಹಲವಾರು ಸಂಶೋಧಕರಿಗೆ ಪ್ರತಿ ವರ್ಷ ಈ ಪ್ರತಿಷ್ಠಿತ ಪ್ರಶಸ್ತಿ ದೊರೆಯುತ್ತ ಬಂದಿದೆ.
ಜೀವನವಿಡೀ ಬ್ರಹ್ಮಚಾರಿ ಆಗಿ ಉಳಿದಿದ್ದ (ಆತನಿಗೆ ಮೂವರು ಪ್ರಿಯತಮೆಯರು ಇದ್ದರು ಎಂಬ ಉಲ್ಲೇಖ ಇದೆ) ಸರ್ ಆಲ್ಫ್ರೆಡ್ ನೊಬೆಲ್ ಈ ಪ್ರಶಸ್ತಿಗಳ ಸ್ಥಾಪನೆಯ ಮೂಲಕ ತನ್ನ ಪಾಪವನ್ನು ತೊಳೆದುಕೊಂಡನು.
1896 ಡಿಸೆಂಬರ್ 10ರಂದು ಆತ ತೀರಿಹೋದ ನಂತರ ಆತನ ಸಂಸ್ಮರಣಾ ದಿನದಂದು ಈ ಪ್ರಶಸ್ತಿಯ ವಿತರಣೆ ಇಂದಿಗೂ ಅದ್ದೂರಿಯಾಗಿ ನಡೆಯುತ್ತ ಬಂದಿದೆ.
ಆ ಮರಣದ ವಾರ್ತೆಯನ್ನು ಪ್ರಕಟ ಮಾಡಿದ ಪತ್ರಿಕೆಗೆ ಒಂದು ಬೊಗಸೆ ಧನ್ಯವಾದ ಹೇಳೋಣ ಅಲ್ಲವೇ!
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top