ಕೇವಲ 350 ರೂಪಾಯಿಗಾಗಿ ಅಪ್ರಾಪ್ತ ಬಾಲಕನೋರ್ವ ಯುವಕನನ್ನು 60ಕ್ಕೂ ಹೆಚ್ಚು ಬಾರಿ ಇರಿದು ಹತ್ಯೆಗೈದ ಭೀಭತ್ಸ ಘಟನೆ ಈಶಾನ್ಯ ದೆಹಲಿಯ ವೆಲ್ ಕಮ್ ರಸ್ತೆಯಲ್ಲಿ ನಡೆದಿದೆ.
ಹತ್ಯೆಯ ಬಳಿಕ ಶವದ ಬಳಿ ಡ್ಯಾನ್ಸ್ ಮಾಡುತ್ತಿರುವ ಬಾಲಕನ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ. ಇರಿತಕ್ಕೊಳಗಾದ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಯುವಕನ ಹತ್ಯೆಗೆ ಮೊದಲು ಬಾಲಕ ಹಣಕ್ಕಾಗಿ ಪೀಡಿಸಿದ್ದಾನೆ. ಹಣ ಕೊಡಲು ನಿರಾಕರಿಸಿದಾಗ, ಯುವಕನ ಕತ್ತು ಹಿಸುಕಿದ್ದಾನೆ. ಬಳಿಕ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಲಕ ನಶೆಯ ಅಮಲಿನಲ್ಲಿದ್ದು, ಯುವಕನ ದೇಹದ ಬಳಿ ನಿಂತು ನೃತ್ಯ ಮಾಡುತ್ತಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಲಕನ ವಿಚಾರಣೆ ನಡೆಯುತ್ತಿದೆ.