ಬೆಂಗಳೂರು: ಅಪರಿಚಿತರ ಗುಂಪೊಂದು ಯುವಕನೊಬ್ಬನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಸಮೀಪ ರೆಸ್ಟೋರೆಂಟ್ ಒಂದರಲ್ಲಿ ನಡೆದಿದೆ.
ಸೂರ್ಯ (22) ಹತ್ಯೆಯಾದ ಯುವಕ.
ಭಾನುವಾರ ರಾಮೇಶ್ವರ ಸಮೀಪದ ರೆಸ್ಟೋರೆಂಟ್ ಒಂದಲ್ಲಿ ಸೂರ್ಯ ನಾಲ್ವರು ಸ್ನೇಹಿತರೊಂದಿಗೆ ಫೋಟೊ ಶೂಟ್ ಮಾಡುತ್ತಿದ್ದ ವೇಳೆ ಅಪರಿಚಿತರ ಗುಂಪೊಂದು ಅವರ ಜತೆ ಕಿರಿಕ್ ತೆಗೆದಿದೆ. ಅಪರಿಚಿತರ ತಂಡ ಫೋಟೋ ತೆಗೆದಿದ್ದ ಕ್ಯಾಮೆರಾ ಕಿತ್ತುಕೊಂಡು ನಾಲ್ವರು ಯುವಕರ ಮೇಲೆ ಹಲ್ಲೆ ಮಾಡಿ, ಸೂರ್ಯನಿಗೆ ಚಾಕುವಿನಿಂದ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೂರ್ಯನನ್ನು ತಕ್ಷಣ ದೊಡ್ಡಬಳ್ಳಾಪುರದ ಆಸ್ಪತ್ರೆಯೊಂದಕ್ಕೆ ಕರೆದೊಯ್ದ ಸಂದರ್ಭ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ದೀಪಾವಳಿ ಹಬ್ಬದಂದೇ ಮಗನನ್ನು ಕಳೆದುಕೊಂಡ ಕುಟುಂಬ ಇದೀಗ ಕಣ್ಣೀರು ಹಾಕುತ್ತಿದ್ದಾರೆ.
ಈ ಕುರಿತು ದೊಡ್ಡಬೆಳಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.