ಬೆಂಗಳೂರು: ಆರ್ಗ್ಯಾನಿಕ್ ಚೀಲದ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಮಾಡಿದ ಆರೋಪದ ಮೇಲೆ ಎನ್ವಿ ಗ್ರೀನ್ ಬಯೋಟೆಕ್ ಮಾಲೀಕ ಅಶ್ವತ್ಥ ಹೆಗ್ಡೆ ಎಂಬವರ ವಿರುದ್ಧ ಉದ್ಯಮಿ ನೀಲಿಮಾ ಎಂಬವರು ನೀಡಿದ ದೂರಿನಂತೆ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಪ್ಲಾಸ್ಟಿಕ್ ಬದಲು ಆರ್ಗ್ಯಾನಿಕ್ ಬ್ಯಾಗ್ ಕಂಡು ಹಿಡಿದಿದ್ದಾಗಿ ನಂಬಿಸಿದ್ದ ಅಶ್ವತ್ಥ ಹೆಗ್ಡೆ ಬಿಸಿ ನೀರಿನಲ್ಲಿ ಕರಗುವ ಕೈಚೀಲ ಮಾಡುವುದಾಗಿ ಭರವಸೆ ನೀಡಿದ್ದರು. ಯಂತ್ರ ಹಾಗೂ ಕಾರ್ಮಿಕರನ್ನು ಕೊಡುವುದಾಗಿ ಹೇಳಿದ್ದರು. 1.26 ಕೋಟಿ ರೂಪಾಯಿ ಮೌಲ್ಯದ ಯಂತ್ರ ಕೊಡುವುದಾಗಿ ಹೇಳಿದ್ದರು ಎಂಬುದಾಗಿ ನೀಲಿಮಾ ದೂರಿನಲ್ಲಿ ತಿಳಿಸಿದ್ದಾರೆ.
ಇದಕ್ಕಾಗಿ ಅಶ್ವತ್ಥ ಹೆಗ್ಡೆಗೆ 74 ಲಕ್ಷ ರೂಪಾಯಿ ಹಣವನ್ನು ನೀಲಿಮಾ ನೀಡಿದ್ದರು. ಆದರೆ, 5 ಲಕ್ಷ ರೂಪಾಯಿ ಮೌಲ್ಯದ ಯಂತ್ರ ಕೊಟ್ಟು ಅಶ್ವತ್ ಹೆಗ್ಡೆ ಮೋಸ ಮಾಡಿದ್ದಾರೆ. ತಯಾರಿಕಾ ಜ್ಞಾನವೇ ಇಲ್ಲದ ಕಾರ್ಮಿಕರನ್ನು ನೀಡಿದ್ದಾರೆ. ಆರ್ಗ್ಯಾನಿಕ್ ಬ್ಯಾಗ್ ತಯಾರಿಕೆಗೆ ಕಚ್ಚಾ ವಸ್ತು ಸಹ ನೀಡಲಿಲ್ಲ ಎಂದು ಆರೋಪಿಸಲಾಗಿದೆ.
ಸದ್ಯ ಅಶ್ವತ್ ಹೆಗ್ಡೆ ವಿರುದ್ಧ ಐಪಿಸಿ ಸೆಕ್ಷನ್ 406, 420ರಡಿ ಪ್ರಕರಣ ದಾಖಲಿಸಲಾಗಿದೆ. ಚೀಲದ ಹೆಸರಲ್ಲಿ ಕೋಟಿಗಟ್ಟಲೇ ಫಂಡ್ ಕಲೆಕ್ಷನ್ ಆರೋಪ ಹಿನ್ನೆಲೆಯಲ್ಲಿ ನಾಗುರ, ಛತ್ತೀಸ್ಗಢ, ಹೈದರಾಬಾದ್ನಲ್ಲೂ ಅಶ್ವತ್ಥವಿರುದ್ಧ ಕೇಸ್ ದಾಖಲಾಗಿದೆ.