ರಾಜಕಾಲುವೆ, ಚರಂಡಿ ಹೂಳೆತ್ತುವ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ | ತನಿಖೆಗೆ ಲೋಕಾಯುಕ್ತರಿಂದ ಆದೇಶ

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ರಾಜಕಾಲುವೆ ಹಾಗೂ ಚರಂಡಿಗಳ ಹೂಳೆತ್ತುವ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಈ ಕುರಿತು ನಗರಸಭೆ ಹಿಂದಿನ ಪೌರಾಯುಕ್ತೆ ರೂಪಾ ಶೆಟ್ಟಿ, ಇಂಜಿನಿಯರ್ ದಿವಾಕರ್ ಹಾಗೂ ಅಕೌಂಟೆಂಟ್ ಚಂದ್ರರಾಮ ದೇವಾಡಿಗ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ತನಿಖೆಗೆ ಲೋಕಾಯುಕ್ತರಿಂದ ಆದೇಶಿಸಲಾಗಿದೆ ಎಂದು ನಗರಸಭೆ ಮಾಜಿ ವಿಪಕ್ಷ ನಾಯಕ ಮಹಮ್ಮದಾಲಿ ತಿಳಿಸಿದ್ದಾರೆ.

ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2018-19 ಹಾಗೂ 2020-21 ರಲ್ಲಿ ನಗರಸಭೆ ವ್ಯಾಪ್ತಿಯಲ್ಲಿನ ರಸ್ತೆ ಬದಿಗಳಲ್ಲಿರುವ ಚರಂಡಿ ಹಾಗೂ ರಾಜಕಾಲುವೆಗಳ ಹೂಳೆತ್ತುವ ಕಾರ್ಯಕ್ಕೆ ಟೆಂಡರ್ ಕರೆದು ಸ್ಥಳೀಯರೊಬ್ಬರಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಕಾಮಗಾರಿ ನಡೆದಿಲ್ಲ ಎಂದು ಕೆಲವೊಂದು ವಾರ್ಡುಗಳ ಸದಸ್ಯರಿಂದ ದೂರುಗಳು ಕೇಳಿ ಬಂದಿತ್ತು. ಕಾಮಗಾರಿಯನ್ನು ಜೆಸಿಬಿಯಿಂದ ಮಾಡಲಾಗಿರುವುದಕ್ಕೆ ಫೋಟೊಗಳು ನನಗೆ ಲಭಿಸಿದೆ. ಆದರೆ ಹೂಳೆತ್ತುವ ಕಾಮಗಾರಿಯ ಅಂದಾಜುಪಟ್ಟಿ, ಬಿಲ್ಲು ಪ್ರತಿ, ಎಂಬಿ ಪುಸ್ತಕಗಳ ಪ್ರತಿ ಸಹಿತ ಫೋಟೊಗಳನ್ನು ಪಡೆದುಕೊಂಡು ಪರಿಶೀಲಿಸಿದಾಗ ವ್ಯಾಪಕ ಅವ್ಯವಹಾರ ನಡೆದಿರುವುದು ಕಂಡು ಬಂದಿದೆ ಎಂದು ಅವರು ಆರೋಪಿಸಿದರು.

ನಗರಸಭೆಗೆ ಚುನಾಯಿತ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹೂಳೆತ್ತುವ ಕಾಮಗಾರಿಗೆ ಬೇಕಾದ 20 ಲಕ್ಷದ ಅಂದಾಜು ಪಟ್ಟಿಯನ್ನು 40 ಲಕ್ಷಕ್ಕೆ ಏರಿಕೆ ಮಾಡಲಾಗಿತ್ತು. ವಾರ್ಡು ಸದಸ್ಯರ ದೂರಿನ ಅನ್ವಯ ಮಾಹಿತಿ ಹಕ್ಕಿನಲ್ಲಿ ಪಡೆದುಕೊಂಡಾಗ ಜೆಸಿಬಿಯಿಂದ ಕಾಮಗಾರಿ ನಡೆಸಿದರೂ ಬಿಲ್ಲುಗಳನ್ನು ಕೂಲಿಯಾಳುಗಳ ಹೆಸರಿನಲ್ಲಿ ಮಾಡಲಾಗಿರುವುದು ಕಂಡು ಬಂದಿದೆ. ಚರಂಡಿ ಕಾಮಗಾರಿ ಬಳಿಕ ನಗರಸಭೆಯಿಂದ ನಿಜವಾಗಿ ಗುತ್ತಿಗೆದಾರರಿಗೆ ಪಾವತಿಸಬೇಕಾದ್ದು 10.74 ಲಕ್ಷ. ಆದರೆ ಕೂಲಿಯಾಳುಗಳ ಮೊತ್ತದಂತೆ 35.65 ಲಕ್ಷ ಪಾವತಿ ಮಾಡಲಾಗಿದ್ದು, ಸುಮಾರು 24.90 ಲಕ್ಷ ರೂ. ಹಣ ದುರುಪಯೋಗ ಮಾಡಲಾಗಿದೆ. ಈ ನಿಟ್ಟಿನಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದು, ತನಿಖೆ ಹಂತದಲ್ಲಿದೆ ಎಂದು ತಿಳಿಸಿದರು.



































 
 

2022-23ನೇ ಸಾಲಿನಲ್ಲಿ ಚರಂಡಿ ಹಾಗೂ ರಾಜಕಾಲುವೆಗಳ ಹೂಳೆತ್ತುವ ಕಾಮಗಾರಿಯನ್ನು ಕೂಲಿಯಾಳುಗಳ ಬದಲಿಗೆ ಯಂತ್ರೋಪಕರಣದ ಮೂಲಕ ನಡೆಸುವುದೆಂದು ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಕರೆಯಲಾಗಿದೆ. ಮಳೆಗಾಲದ ಮೊದಲೇ ಈ ಕಾಮಗಾರಿ ನಡೆಯಬೇಕಿತ್ತು. ಆದರೆ ಚುನಾವಣೆ ನಡೆದು ಆರು ತಿಂಗಳು ಕಳೆದರೂ ಕಾಮಗಾರಿ ಈ ವರೆಗೂ ನಡೆದಿಲ್ಲ. ಈ ಸಾಲಿನಲ್ಲೂ ಹಣ ದುರುಪಯೋಗ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, 2018 ರಿಂದಲೇ ಈ ಕಾಮಗಾರಿಯನ್ನು ಓರ್ವ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಅವರು, ತಕ್ಷಣ ಈ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಹಾಕಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಕಾಂಗ್ರೆಸ್ ನ ರಿಯಾಝ್, ಮಂಜುನಾಥ, ಮೌರಿಸ್ ಕುಟಿನ್ಹ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top