ಪುತ್ತೂರು: ಗುರು ಹಿರಿಯರ ಆಶೀರ್ವಾದ ಪಡೆಯುವ ವಧೂ-ವರರಿಗೆ ಸಂಸ್ಕಾರವನ್ನು ಕೊಡುವ ಒಂದು ವಿಧಿಯೇ ಮದುವೆ. ಪ್ರಕೃತಿಯ ಶಿಶುವಾದ ಮಾನವನು ಸಂಸ್ಕೃತಿಯಿಂದ ವಿಕಸಿತನಾಗಿ, ವಿಕೃತಿಯೆಡೆಗೆ ಜಾರದಂತೆ ಧರ್ಮಾಚರಣೆಯಲ್ಲಿ ತೊಡಗಿ ಸಮೃದ್ಧಿ, ಸಂಸ್ಕೃತಿ ಎರಡರಲ್ಲೂ ಸಮತೋಲನ ಕಾಪಾಡಿಕೊಳ್ಳಬೇಕು. ಮಾತೃಧರ್ಮ ಪಾಲನೆಯೊಂದಿಗೆ ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಮಾಡುತ್ತಾ, ಅವರನ್ನು ಕುಟುಂಬದ, ತನ್ಮೂಲಕ ದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಹೇಳಿದರು.
ಅವರು ಇಲ್ಲಿಯ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ನವದಂಪತಿ ಸಮಾವೇಶದಲ್ಲಿ ಮಾತನಾಡಿದರು.
ಪರಂಪರೆ, ಸಂಪ್ರದಾಯಗಳಿಂದ ಒಡಗೂಡಿದ ಕುಟುಂಬಗಳಿರುವ ಭಾರತವು ಜಗತ್ತಿಗೇ ಮಾರ್ಗದರ್ಶನ ತೋರುವ ಶಕ್ತಿಯನ್ನು ಹೊಂದಿದೆ ಎಂದು ಅವರು ಹೇಳಿದರು.
ಆರಂಭದಲ್ಲಿ ನವದಂಪತಿಯರು ಸರಸ್ವತಿ ದೇವಿಯ ಮುಂದೆ ಪರಸ್ಪರ ಹೂವಿನ ಹಾರಗಳನ್ನು ಬದಲಾಯಿಸಿಕೊಂಡರು. ಅಖಂಡ ಭಾರತಕ್ಕೆ ಹಣತೆಗಳನ್ನು ಬೆಳಗಿಸುವ ಮೂಲಕ ಭಾಗವಹಿಸಿದ ದಂಪತಿಗಳಿಗೆ ಬಾಗಿನ ಸಮರ್ಪಿಸಲಾಯಿತು.
ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ್ ಚಂದ್ರಗಿರಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ನಿರ್ದೇಶಕಿ ಡಾ. ಸುಧಾ ಎಸ್. ರಾವ್ ಸೂಕ್ತ ಮಾರ್ಗದರ್ಶನ ನೀಡಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ಸಮಾರೋಪ ಸಮಾರಂಭದಲ್ಲಿ ಹಿರಿಯ ದಂಪತಿಯಾಗಿ ಜಯಶ್ರೀ ಹಾಗೂ ರಾಜಗೋಪಾಲ್ ಭಟ್, ಜೀವನದಲ್ಲಿ ದೈಹಿಕ, ಆರ್ಥಿಕ ಸಮಸ್ಯೆಗಳಂತಹ ಯಾವುದೇ ತೊಂದರೆಗಳು ಬಂದರೂ ಪರಸ್ಪರ ಹೊಂದಾಣಿಕೆ, ಸ್ನೇಹ, ಪ್ರೀತಿಗಳಿಂದ ಮನಸ್ಸನ್ನು ಅರಿತು ನಡೆದರೆ ಸಂಸಾರವು ಸುಖ ಸಮೃದ್ಧಿಗಳಿಂದ ಸಂತಸಮಯವಾಗಿರುತ್ತದೆ ಎಂದರು.
ಸಮಾರೋಪ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗದ ಸಹಸಂಯೋಜಕ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್, ಮದುವೆ ಎಂಬುದು ಕೇವಲ ಇಬ್ಬರ ನಡುವಿನ ಒಪ್ಪಂದವಾಗಿರದೆ ಗುರುಹಿರಿಯರ ಆಶೀರ್ವಾದ ಸಹಿತವಾಗಿ ಏರ್ಪಡುವ ಸಂಬಂಧ. ಎರಡು ಹೃದಯಗಳ, ಎರಡು ವ್ಯಕ್ತಿಗಳ ಜೊತೆಗೆ ಎರಡು ಕುಟುಂಬಗಳನ್ನು ಬೆಸೆಯುವ ನಂಟು. ಶ್ರೇಷ್ಠವಾದ ಗೃಹಸ್ಥಧರ್ಮವನ್ನು ಪಾಲಿಸುತ್ತಾ, ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡುವಲ್ಲಿಯೇ ವಿವಾಹ ವಿಧಿಯ ಸಾರ್ಥಕತೆ ಅಡಗಿದೆ ಎಂದರು.
ಭರತನಾಟ್ಯ ಗುರು ವಿದುಷಿ ಪ್ರೀತಿಕಲಾ ಪ್ರಾರ್ಥಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಆಶಾ ಬೆಳ್ಳಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಸಂಚಾಲಕ ವಸಂತ ಸುವರ್ಣ ವಂದಿಸಿದರು. ಶಿಕ್ಷಕರಾದ ರಾಜೇಶ್ ಮತ್ತು ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.