ಸುಬ್ರಹ್ಮಣ್ಯ: ಇಲ್ಲಿನ ರೋಟರಿ, ಲಯನ್ಸ್, ಇನ್ನರ್ ವ್ಹೀಲ್ ಕ್ಲಬ್, ಅರಣ್ಯ ಇಲಾಖೆ ಆಶ್ರಯದಲ್ಲಿ ಬೀಜ ಬಿತ್ತುವ ಹಾಗೂ ಬೃಹತ್ ಸ್ವಚ್ಚತಾ ಅಭಿಯಾನಕ್ಕೆ ಕುಲುಕುಂದ ಶ್ರೀ ಚಾಮುಂಡೇಶ್ವರಿ ಗಡಿಯಲ್ಲಿ ಚಾಲನೆ ನೀಡಲಾಯಿತು.
ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಮಲ್ ಬಾಬು, ಅರಣ್ಯ ಪೋಷಣೆ, ಬೆಳವಣಿಗೆ ಹಾಗೂ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಇದರೊಂದಿಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಂಘ – ಸಂಸ್ಥೆಗಳು ಇಂತಹ ಅಭಿಯಾನ ನಡೆಸಿದಾಗ ಉದ್ದೇಶ ಈಡೇರುತ್ತದೆ ಎಂದರು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಪ್ರಶಾಂತ್ ಕೋಡಿಬೈಲು ಅಧ್ಯಕ್ಷತೆ ವಹಿಸಿದ್ದರು. ರೋಟರಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಹಾಗೂ ಲಯನ್ಸ್ ಜಿಲ್ಲೆ 317 ಇದರ ವಲಯ ಪ್ರಾಂತೀಯ ಅಧ್ಯಕ್ಷ ರೇಣುಕಾ ಸದಾನಂದ ಜಾಕೆ ಮುಖ್ಯ ಅತಿಥಿಗಳಾಗಿದ್ದರು.
ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಚಂದ್ರ ಪಳಂಗಾಯ, ಲಯನ್ಸ್ ಕಾರ್ಯದರ್ಶಿ ಸತೀಶ ಕೂಜುಗೋಡು, ಲಯನ್ಸ್ ಖಜಾಂಜಿ ಚಂದ್ರಶೇಖರ ಪಾನತ್ತಿಲ್ ಉಪಸ್ಥಿತರಿದ್ದರು.
ಇನ್ನರ್ ವೀಲ್ ಅಧ್ಯಕ್ಷ ವೇದ ಶಿವರಾಮ್ ವಂದಿಸಿದರು. ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರೂಪಿಸಿದರು. ಕುಲಕುಂದ ಚಾಮುಂಡೇಶ್ವರಿ ಗಡಿಯಲ್ಲಿ ‘ಕಾಡಿನೆಡೆಗೆ ನಮ್ಮ ನಡಿಗೆ’ ಎಂಬ ಘೋಷಣೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮ, ಗಿಡ ನೆಡುವ ಹಾಗೂ ಸ್ವಚ್ಛತಾ ಕಾರ್ಯಕ್ರಮ ಬಿಸಿಲೆವರೆಗೆ ಸಾಗಿ ಅಲ್ಲಿ ಸಮಾಪ್ತಿಗೊಂಡಿತು.
























