ಸಾಧನೆಗೆ ಪ್ರಾಮಾಣೀಕತೆ, ಯೋಜನೆ, ಶ್ರಮವೇ ಬಂಡವಾಳ | ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯ ವಾರ್ಷಿಕ ಘಟಿಕೋತ್ಸವದಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ಟೆಕ್ನಿಕಲ್ ಕೋರ್ಸ್ ಪಾಸ್ ಆದ ಬಳಿಕ ಜೀವನದಲ್ಲಿ ಅಚ್ಯುವ್‌ಮೆಂಟ್ ಮಾಡಬೇಕು. ಇಂತಹ ಅಚ್ಯುವ್‌ಮೆಂಟ್‌ಗೆ ಪ್ರಾಮಾಣಿಕತೆ, ಯೋಜನೆ, ಶ್ರಮವಿದ್ದರೆ ಯಶಸ್ಸು ಖಂಡಿತಾ ಸಿಗುತ್ತದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಸೋಮವಾರ ನಡೆದ ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಸಂಸ್ಥೆಯ ಕೌಶಲ್ಯ ಸಭಾವನದಲ್ಲಿನ ಡಿ.ವಿ ಸದಾನಂದ ಗೌಡ ಮತ್ತು ಸಂಜೀವ ಮಠಂದೂರು ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದರು.

ಇಂಜಿನಿಯರಿಂಗ್ ಮಾಡಿದವರು ತುಂಬಾ ಜನ ಕೆಲಸ ಇಲ್ಲದೆ ಇದ್ದಾರೆ. ಆದರೆ ಇವತ್ತು ಐಟಿಐ ಮಾಡಿದವರಿಗೆ ಎಲ್ಲರಿಗೂ ಕೆಲಸ ಸಿಕ್ಕಿದೆ. ಇದು ನಿಜವಾಗಿ ಒಳ್ಳೆಯ ವಿಚಾರ. ಸರಕಾರಿ ಐಟಿಐ ಕಾಲೇಜಿನಲ್ಲಿ ಸೀಟಿಗಾಗಿ ನಮ್ಮಲ್ಲಿ ಬೇಕಾದಷ್ಟು ಜನ ಶಿಫಾರಸ್ಸಿಗೆ ಬರುತ್ತಾರೆ. ಇವತ್ತು ಐಟಿಐಗೆ ಹೆಚ್ಚಿನ ಬೇಡಿಕೆ ಇದೆ. ಹಾಗಾಗಿ ಐಟಿಐ ವಿದ್ಯಾರ್ಥಿಗಳು ನಿರ್ದಿಷ್ಟವಾದ ಸಮಯದಲ್ಲಿ, ಉತ್ತಮ ಆಲೋಚನೆ ಮಾಡಬೇಕು ಎಂದ ಅವರು, ಯಾರೂ ಕೂಡ ಹಣವಿದ್ದು ಉದ್ಯಮ ಮಾಡಿದವರಲ್ಲ. ಇದಕ್ಕೆ ನಾನೇ ಸಾಕ್ಷಿ. ನಾನು ಕೂಡ ಸೇರಿ ಬಹುತೇಕ ಮಂದಿ ಹಂತ ಹಂತವಾಗಿ ಮೇಲಕ್ಕೆ ಬಂದವರು ಎಂದರು.



































 
 

ಐಟಿಐ ಹುಡಗನು ಬಿ.ಇ ಇಂಜಿನಿಯರ್ ಸಂಬಳ ಪಡೆಯಬಹುದು:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಅವರು ಮಾತನಾಡಿ ಸುಳ್ಯ ತಾಲೂಕಿನಲ್ಲಿ 1921 ರಿಂದ 50 ತನಕ ಒಂದೇ ಒಂದು ಹೈಸ್ಕೂಲ್ ಇರಲಿಲ್ಲ. ಹಾಗಾಗಿ 1929ರಲ್ಲಿ ಗೌಡ ವಿದ್ಯಾಸಂಘ ಪುತ್ತೂರಿನಲ್ಲಿ ವಿದ್ಯಾರ್ಥಿ ನಿಲಯ ಮಾಡುವ ಉದ್ದೇಶವಿಟ್ಟುಕೊಂಡು ತನ್ನ ಯೋಜನೆ ರೂಪಿಸಿತ್ತು. ಇಂದು ಅದು ಐಟಿಐ ಆಗಿ, ಹೆಮ್ಮರವಾಗಿ ಬೆಳೆದಿದೆ. ಇವತ್ತು ಐಟಿಐ ಕಲಿತ ಹುಡುಗರಿಗೂ ಬಿ.ಇ ಇಂಜಿನಿಯರ್‌ಗೆ ಸಿಗುವಂತಹ ಸಂಬಳ ಸಿಗುತ್ತಿದೆ. ಹಾಗಾಗಿ ಐಟಿಐಗೆ ಇವತ್ತು ಉತ್ತಮ ಅವಕಾಶವಿದೆ ಎಂದ ಅವರು, ಇಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಸಾಧಕರಾಗಲಿ ಎಂದು ಹಾರೈಸಿದರು.

ಯುವ ಶಕ್ತಿಗೆ ಸರಕಾರದ ಹಲವು ಯೋಜನೆ:

ಸಂಸ್ಥೆಯ ನಿರ್ದೇಶಕ, ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಭಾರತ ಎಲ್ಲಾ ಕ್ಷೇತ್ರದಲ್ಲಿ ಮುಂದುವರಿದರೆ ಸೂಪರ್ ಪವರ್ ಆಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಯುವ ಶಕ್ತಿಗೆ ಹಲವು ಯೋಜನೆ ನೀಡಿದೆ. ಕೌಶಲ್ಯಾಭಿವೃದ್ಧಿ ಇಲಾಖೆ ಆರಂಭಿಸಿ ಯುವಕರಿಗೆ ಶಕ್ತಿ ನೀಡಿದೆ. ಪ್ರೌಢಶಾಲೆಯ ವಿದ್ಯಾರ್ಥಿಗಳು ತಂತ್ರಜ್ಞಾನ ಕಲಿಯಬೇಕೆಂದು ಅಟಲ್ ಟಿಂಕರಿಂಗ್ ಲ್ಯಾಬ್ ನೀಡಿದೆ. ಸರಕಾರಿ ಐಟಿಐಗೆ ರೂ. 30 ಕೋಟಿಯ ಯಂತ್ರೋಪಕರಣ ನೀಡುವ ಹಲವು ಯೋಜನೆ ನೀಡಿದೆ. ಅದೇ ರೀತಿ ಐಟಿಐ ವಿದ್ಯಾರ್ಥಿಗಳು ಕೂಡ ಪದವಿ ವಿದ್ಯಾರ್ಥಿಗಳಿಗಿಂತ ಕಡಿಮೆ ಇಲ್ಲ ಎಂದು ಅವರಿಗೂ ಪದವಿ ನೀಡುವ ಕಾರ್ಯಕ್ರಮ ನೀಡಿದೆ. ವಿದ್ಯಾರ್ಥಿಗಳು ಕೂಡ ವಿದ್ಯೆಯನ್ನು ಜ್ಞಾನಾರ್ಜನೆಗಾಗಿ ಪಡೆಯಬೇಕೇ ವಿನಃ ಧನ ಸಂಪದಾನೆಯ ಗುರಿಯಿಟ್ಟಲ್ಲ. ಜ್ಞಾನಾರ್ಜನೆ ಆದರೆ ಹಂತಹಂತವಾಗಿ ಧನಪ್ರಾಪ್ತಿಯಾಗುತ್ತದೆ ಎಂದರು.

ಐಟಿಐ ಕಲಿತವರಿಗೆ ಕೆಲಸ ಮಾಡುವುದು,  ಕ್ರಿಯೇಟ್ ಮಾಡುವುದು ಗೊತ್ತಿದೆ:

ಎಸ್ ಆರ್ ಕೆ ಲ್ಯಾಡರ್ಸ್ ನ ಮಾಲಕ ಕೇಶವ ಅಮೈ ಮಾತನಾಡಿ, ಇವತ್ತು ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆ ಇದೆ. ಬೇಸಿಕ್ ಸ್ಕಿಲ್‌ಗೆ ಐಟಿಐ ಮುಖ್ಯ. ಇವತ್ತು ಬೇಸಿಕ್ ಸ್ಕಿಲ್’ಗೆ ಸುಮಾರು 1 ಕೋಟಿಯಷ್ಟು ಕೊರತೆಯಿದೆ. ಮುಂದಿನ ವರ್ಷ 2ರಿಂದ 4 ಕೋಟಿಯಷ್ಟು ಹೋಗಬಹುದು. ಇದು ದೇಶದ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಈ ನಿಟ್ಟಿನಲ್ಲಿ ಐಟಿಐ ಉತ್ತಮ ಕೌಶಲ್ಯಭರಿತ ವಿದ್ಯಾರ್ಥಿಗಳನ್ನು ತರಬೇತು ಮಾಡುವ ಮೂಲಕ ದೊಡ್ಡ ಹೆಜ್ಜೆ ಇಟ್ಟಿದೆ. ಇಲ್ಲಿ ಊರಿಗೆ, ಸಮಾಜಕ್ಕೆ, ದೇಶಕ್ಕೆ ಬೇಕಾಗುವ ರೀತಿಯಲ್ಲಿ ತರಬೇತುದಾರರು ತಯಾರಾಗುತ್ತಾರೆ. ಐಟಿಐ ಕಲಿತವರಿಗೆ ಕೆಲಸ ಮಾಡಬಹುದು. ಕೆಲಸ ಕ್ರಿಯೇಟ್ ಮಾಡಲು ಸಾಧ್ಯವಿದೆ. ಅದರೆ ಕಲಿಕೆಯ ಪಠ್ಯಕ್ರಮಕ್ಕೂ ಇಂಡಸ್ಟ್ರೀ ವಿಚಾರಕ್ಕೂ ವ್ಯತ್ಯಾಸವಿದೆ ಇದನ್ನು ಗಮನಿಸಬೇಕು. ಯಾಕೆಂದರೆ ವಿದೇಶದಲ್ಲಿ ಪಠ್ಯದ ಅಂಕಕ್ಕೆ ಕೆಲಸ ಇಲ್ಲ. ಕೌಶಲ್ಯಕ್ಕೆ ಮಾತ್ರ ಕೆಲಸ. ನಮ್ಮಲ್ಲಿ ಅನೇಕ ಮಂದಿ ವಿದೇಶಕ್ಕೆ ಹೋಗಲು ಕೌಶಲ್ಯದ ಪ್ರಮಾಣ ಪತ್ರಕ್ಕಾಗಿ ಬರುತ್ತಾರೆ. ಅವರಿಗೆ ನಾವು ಪೂರ್ಣ ಸಹಕಾರ ನೀಡುತ್ತೇವೆ ಎಂದ ಅವರು, ನನಗೆ ಇಂಡಸ್ಟ್ರಿ ಕ್ಷೇತ್ರದಲ್ಲಿ 24 ವರ್ಷದ ಅನುಭವ ಇದೆ. ನನ್ನ ಅನುಭವ ಹಂಚಿಕೊಳ್ಳಲು ನಾನು ಯಾವಾಗಲು ಸಿದ್ದನಿದ್ದೇನೆ ಎಂದರು.

ಕುತೂಹಲ ಬೆಳೆಸಿಕೊಳ್ಳಿ, ಕಲಿಕೆಯನ್ನು ನಿಲ್ಲಿಸಬೇಡಿ:

ತಾಂತ್ರಿಕ ವಿಭಾಗದ ಸದಸ್ಯೆ ವಚನ ಜಯರಾಮ್ ಮಾತನಾಡಿ, ಕಲಿಕೆ ಉಸಿರು ಇರುವ ತನಕ ಮುಗಿಯುವುದಿಲ್ಲ. ಯಾಕೆಂದರೆ ಇಲ್ಲಿ ತನಕ ಇರುವ ಸ್ಕಿಲ್ ಪರೀಕ್ಷೆ ಪಾಸ್ ಮಾಡಿಸಿ ಉದ್ಯೋಗ ಸಿಕ್ಕಿದ ಬಳಿಕವೂ ಬೇಕಾಗುತ್ತದೆ. ಉದ್ಯೋಗದಲ್ಲಿ ಉನ್ನತ ಮಟ್ಟಕ್ಕೆ ಹೋಗಲು ಕಲಿಯುವ ಶೈಲಿ ಬದಲು ಮಾಡಬೇಕು. ಆದಷ್ಟು ಕೆಲಸದ ಕುತೂಹಲ ಬೆಳೆಸಿಕೊಳ್ಳಿ. ಕಲಿಕೆಯನ್ನು ನಿಲ್ಲಿಸಬೇಡಿ ಎಂದರು.

ಹೊಸ ಸಲಕರಣೆಯ ಕೊರತೆ ನೀಗಿಸುವಂತೆ ಮನವಿ:

ಸಂಸ್ಥೆಯ ನಿರ್ದೇಶಕ ಚಿದಾನಂದ ಬೈಲಾಡಿ ಮಾತನಾಡಿ, ನಮ್ಮ ಸಂಸ್ಥೆಯಿಂದ ವರ್ಷಕ್ಕೆ 92 ವಿದ್ಯಾರ್ಥಿಗಳು ತರಬೇತಿ ಪಡೆದು ಹೊರಗೆ ಹೋಗುತ್ತಾರೆ. ಜೀವನದ ಶಿಕ್ಷಣ ವ್ಯವಸ್ಥೆಯನ್ನು ತಿಳಿಸುವ ಈ ಸಂಸ್ಥೆಯಲ್ಲಿ ಹಲವು ಕೊರತೆಗಳಿವೆ. ವರ್ಷಕ್ಕೊಮ್ಮೆ ಪಠ್ಯಕ್ರಮ ಬದಲಾದಂತೆ ಹೊಸ ಹೊಸ ಯಂತ್ರೋಪಕರಣದ ಕೊರತೆ ಕಾಡುತ್ತದೆ. ಇದಕ್ಕಾಗಿ ಸುಮಾರು ರೂ. 50 ಲಕ್ಷ ಬೇಕಾಗುತ್ತದೆ. ಅದೇ ರೀತಿ ತರಬೇತು ಅಧಿಕಾರಿಗಳ ಕೊರತೆ ಇದೆ. ಸಂಸ್ಥೆಯ ಕಟ್ಟಡಕ್ಕೆ ಲಿಫ್ಟ್ ಬೇಕಾಗಿದೆ ಎಂದು ಅವರು ಶಾಸಕರಿಗೆ ಬೇಡಿಕೆ ಸಲ್ಲಿಸಿದರು.

ಸಿ.ಪಿ.ಜಯರಾಮ ಗೌಡ ಕನಸು ನನಸು ಮಾಡಿದ್ದೇನೆ:

ಸಂಸ್ಥೆಯ ಸಂಚಾಲಕ ಯು ಪಿ ರಾಮಕೃಷ್ಣ ಸ್ವಾಗತಿಸಿ ಮಾತನಾಡಿ, ಸಂಸ್ಥೆಯ ಸಂಚಾಲಕರಾಗಿದ್ದ ಸಿ.ಪಿ.ಜಯರಾಮ ಗೌಡ ಅವರು ಅನಾರೋಗ್ಯದಿಂದ ನಿಧನರಾದ ಬಳಿಕ ಅವರ ಕನಸನ್ನು ನನಸು ಮಾಡುವ ಕೆಲಸಕ್ಕೆ ನಾನು ಚಾಲನೆ ನೀಡಿ, ಈ ಸುಸಜ್ಜಿತವಾದ ಕೌಶಲ್ಯ ಸೌಧವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದೇನೆ. ಈ ಯಶಸ್ಸಿನ ಹಿಂದೆ ಸಾಕಷ್ಟು ಕೊಡುಗೈ ದಾನಿಗಳು ಸಹಕರಿಸಿದ್ದಾರೆ ಎಂದರು.

ಸಿಕ್ಕಿದ ಕೆಲಸದಲ್ಲಿ ಪರಿಣಿತರಾಗಿ:

ಸಂಸ್ಥೆಯ ಪ್ರಾಚಾರ್ಯ ಪ್ರಕಾಶ್ ಪೈ ವಿ ಅವರು ಮಾತನಾಡಿ, ಉದ್ಯೋಗ ಸಿಕ್ಕಿದ ಬಳಿಕ ಅದು ಸಣ್ಣದಾಗಿರಲಿ, ಕಷ್ಟಕರವಾಗಿರಲಿ ಅದರಲ್ಲೆ ಮುಂದುವರಿದಾಗ ನಿಮಗೆ ಅನುಭವ ಹೆಚ್ಚಾಗುತ್ತಾ ಹೋಗುತ್ತದೆ. ಕೆಲವು ಕಡೆ ಸುಶೀಕ್ಷಿತಾ ತರಬೇತಿಯಲ್ಲಿ 2 ವರ್ಷ ಸ್ಟೈಪಂಡ್ ಸಿಗುತ್ತದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆಂದ ಅವರು, ಈ ಸಂಸ್ಥೆಯಿಂದ ತರಬೇತಿ ಪಡೆದವರು ಅನೇಕ ಉದ್ಯಮದಲ್ಲಿ ಮತ್ತು ಸ್ವಂತ ಉದ್ಯಮ ನಡೆಸುತ್ತಿದ್ದಾರೆ.  ಇದು ನಮಗೆ ಹೆಮ್ಮೆ ಇದೆ. ತರಬೇತುದಾರರು ಕೇವಲ ಕ್ಲಾಸ್ ಆಕ್ಟಿವಿಟಿ ಮಾಡುವ ಕೆಲಸ ಆಗದೆ, ತರಬೇತಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಪಡೆಯಬೇಕು ಎಂದು ಹೇಳಿದರು.

ದ.ಕ ಗೌಡ ವಿದ್ಯಾ ಸಂಘದ ಜೊತೆಕಾರ್ಯದರ್ಶಿ ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಸಂಸ್ಥೆಯ ನಿರ್ದೇಶಕರಾದ ಚಂದ್ರಕಲಾ ಸಿ.ಜೆ, ಜಯರಾಮ ಗೌಡ ಚಿಲ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಿರಿಯ ತರಬೇತು ಅಧಿಕಾರಿಗಳಾದ ಪ್ರಶಾಂತ್ ನಾಯಕ್, ಹರಿಕೃಷ್ಣ ಪಿಎನ್, ಮಧುಕರ ಪಿ.ಎಮ್, ದಯಾನಂದ ಎಸ್.ಕೆ, ಜಯಶೀಲಾ, ಕಚೇರಿ ಅಧೀಕ್ಷಕ ರಾಧಾಕೃಷ್ಣ ಎಮ್ ಅತಿಥಿಗಳನ್ನು ಗೌರವಿಸಿದರು. 

ಕೀರ್ತನ್ ಮತ್ತು ಚಿಂತನ್ ಪ್ರಾರ್ಥಿಸಿದರು. ಸಂಸ್ಥೆಯ ಸಂಚಾಲಕ ಯು ಪಿ ರಾಮಕೃಷ್ಣ ಸ್ವಾಗತಿಸಿದರು. ಸಂಸ್ಥೆಯ ಪ್ರಾಚಾರ್ಯ ಪ್ರಕಾಶ್ ಪೈ ವಂದಿಸಿದರು. ನಾರಾಯಣ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಪ್ರಾಂಶುಪಾಲ ಭವಾನಿ ಗೌಡ, ಸಾರ್ವಜನಿಕ ಸಂಪರ್ಕಾಧಿಕಾರಿ ಉಮೇಶ್, ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಯುವರಾಜ್ ಪೆರಿಯತ್ತೋಡಿ ಸಹಿತ ವಿದ್ಯಾರ್ಥಿಗಳ ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top