ವಿಜಯನಗರ : ಇಲ್ಲಿನ ಹೊಸಪೇಟೆ ಹಾಗೂ ಮರಿಯಮ್ಮನಹಳ್ಳಿ ಮಧ್ಯೆ ಲಾರಿ ಮತ್ತು ಕ್ರೂಸರ್ ನಡುವೆ ಅಪಘಾತ ಸಂಭವಿಸಿದ್ದು, 7ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹೊಸಪೇಟೆಯಿಂದ ಮರಿಯಮ್ಮನ ಹಳ್ಳಿಯತ್ತ ಲಾರಿ ಹೊರಟಿತ್ತು. ಈ ವೇಳೆ ಮರಿಯಮ್ಮನ ಹಳ್ಳಿ ಕಡೆಯಿಂದ ಹೊಸಪೇಟೆಯತ್ತ ಮತ್ತೊಂದು ಲಾರಿ ಹಾಗೂ ಕ್ರೂಸರ್ ಬರುತ್ತಿತ್ತು. ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಲ ಬದಿ ಬರುತ್ತಿದ್ದ ಕ್ರೂಸರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಲಾರಿ ಮಧ್ಯೆ ಸಿಕ್ಕಿಹಾಕಿಕೊಂಡ ಕ್ರೂಸರ್ ವಾಹನ ಅಪ್ಪಚ್ಚಿ ಆಗಿದೆ.
ಅಪಘಾತ ಭೀಕರತೆಗೆ ಸ್ಥಳದಲ್ಲೇ 7 ಮಂದಿ ದುರ್ಮರಣ ಹೊಂದಿದ್ದಾರೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, ಸ್ಥಳದಲ್ಲಿ ವಿಜಯನಗರ ಎಸ್ಪಿ ಶ್ರೀಹರಿಬಾಬು, ಡಿವೈಎಸ್.ಪಿ ಮಂಜುನಾಥ ತಳವಾರ ಮೊಕ್ಕಾಂ ಹೂಡಿದ್ದಾರೆ. ಕ್ರೂಸರ್ ವಾಹನವು ಪೂರ್ತಿ ಛಿದ್ರ ಛಿದ್ರಗೊಂಡಿದೆ. ಲಾರಿ ಮುಂಭಾಗ ಪೂರ್ತಿ ಜಖಂಗೊಂಡಿದ್ದು, ಕಳಚಿ ಬಿದ್ದಿದೆ.
ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದ್ದು, ಪೊಲೀಸರು ಮೃತದೇಹವನ್ನು ಹೊರತೆಗೆಯುತ್ತಿದ್ದಾರೆ. ಈ ಭೀಕರ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಸ್ತೆ ಟ್ರಾಫಿಕ್ ಜಾಮ್ ಉಂಟಾಗಿದೆ.