ಧರ್ಮಸ್ಥಳ: ಧರ್ಮಸ್ಥಳ ನಿವಾಸಿ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದ ಅಕ್ಕಿ ಮಿಲ್ ಉದ್ಯೋಗಿ ಕೃಷ್ಣ ಗಾಣಿಗ (ಕಿಟ್ಟ) ಸೆಪ್ಟೆಂಬರ್ 3ರಂದು ಅಸಹಜವಾಗಿ ಮೃತಪಟ್ಟಿದ್ದು, ಒಂದು ತಿಂಗಳ ಬಳಿಕ ವರದಿ ಬಹಿರಂಗವಾಗಿದೆ.
ಪಾತ್ರೆ ಮಾದರಿಯ ಕೊಪ್ಪರಿಗೆಗೆ ಮುಳುಗಿ ಕೃಷ್ಣ ಗಾಣಿಗ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸೊಂಟದ ಮಟ್ಟಕ್ಕೆ ಇರುವ ಕೊಪ್ಪರಿಗೆಗೆ ಬಿದ್ದು ಸಾಯುವುದಾದರೂ ಹೇಗೆ ಎಂಬ ಪ್ರಶ್ನೆ ಇದೀಗ ಕೇಳಿಬರತೊಡಗಿದೆ. ಒಟ್ಟಿನಲ್ಲಿ ಕೃಷ್ಣ ಗಾಣಿಗ ಅವರ ಸಾವಿನ ಸುತ್ತ ಹಲವು ಸಂಶಯಗಳು ವ್ಯಕ್ತವಾಗತೊಡಗಿದೆ.
ಘಟನೆ ನಡೆದ ದಿನದಂದು ಲಗುಬಗೆಯಿಂದ ಅಂತ್ಯಸಂಸ್ಕಾರದ ಕಾರ್ಯ ಮುಗಿಸಲಾಗಿದೆ. ಎಲ್ಲವನ್ನು ನಿಗೂಢವಾಗಿ ಮಾಡಿ ಮುಗಿಸಲಾಗಿದೆ. ಬಡ ಕುಟುಂಬದ ಕೃಷ್ಣ ಗಾಣಿಗ ಅವರ ಸಾವನ್ನು ಪ್ರಶ್ನಿಸುವ ಬಗ್ಗೆಯೂ ಯಾರೂ ಗಮನ ಹರಿಸಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಚಿಕ್ಕಂದಿನಿಂದಲೇ ಧರ್ಮಸ್ಥಳಕ್ಕೆ ಸಂಬಂಧಿಸಿದ ಅಕ್ಕಿ ಮಿಲ್’ನಲ್ಲಿ ಅವರು ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ಮಕ್ಕಳನ್ನು ಮೃತರು ಅಗಲಿದ್ದಾರೆ.