ಬೆಳಪು: ಏಳನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಂಗಡಿಗರೊಂದಿಗೆ ಈಜಲು ತೆರಳಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳಪು ಕೆಐಎಡಿಬಿ ಯೋಜನಾ ಪ್ರದೇಶದಲ್ಲಿ ನಡೆದಿದೆ.
ಬೆಳಪು ವಸತಿ ಬಡಾವಣೆ ಕಸ್ತೂರಿ ಎಂಬವರ ಪುತ್ರ ವಿಶ್ವಾಸ್ ನಾಯಕ್ (11) ಮೃತಪಟ್ಟ ಬಾಲಕ. ಈತ ಇನ್ನಂಜೆ ಎಸ್.ಎಸ್. ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ.
ಗುರುವಾರ ಶಾಲೆಯಿಂದ ಬಂದು ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ. ಈಜಾಡುತ್ತಿದ್ದ ಬಾಲಕ ಮುಳುಗಿ ಅಸ್ವಸ್ಥನಾಗಿದ್ದನ್ನು ಕಂಡ ಮಕ್ಕಳು ಮಹಿಳೆಯೊಬ್ಬರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ತಕ್ಷಣ ಘಟನಾ ಸ್ಥಳಕ್ಕೆ ಬಂದು ಬಾಲಕನನ್ನು ಮೇಲಕ್ಕೆತ್ತಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾನೆ.
ತಾಯಿ – ಮಗ ಇಬ್ಬರೇ ಇದ್ದು, ಮಗನ ವಿದ್ಯಾಭ್ಯಾಸ ಹಾಗೂ ಮನೆ ನಿರ್ವಹಣೆಗಾಗಿ ತಾಯಿ ಮೆಡಿಕಲ್ ಒಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು ಎಂದು ಹೇಳಲಾಗಿದೆ.