ಮಂಗಳೂರು: ದೇಸಿ ಭಾಷೆಗಳಿಗೆ ಬೆಂಬಲ ಸಿಗುತ್ತಿಲ್ಲ ಎನ್ನುವ ಕೊರಗಿನ ನಡುವೆ, ಇಲ್ಲೊಂದು ಜೋಡಿ ತಮ್ಮ ಮದುವೆ ಆಮಂತ್ರಣವನ್ನು ತಮ್ಮ ಮಾತೃಭಾಷೆಯಾದ ಕೊರಗ ಭಾಷೆಯಲ್ಲಿ ಮುದ್ರಿಸಿ ಗಮನ ಸೆಳೆದಿದೆ.
ಮಂಗಳೂರಿನ ಕೋಡಿಬೆಟ್ಟುವಿನ ಅಕ್ಷತಾ ಹಾಗೂ ಬಾರ್ಕೂರಿನ ಅಮಿತ್ ಕುಮಾರ್ ಅವರ ವಿವಾಹ ನವಂಬರ್ 19ರಂದು ನಡೆಯಲಿದ್ದು, ಮದುವೆಯ ಆಮಂತ್ರಣ ಪತ್ರಿಕೆಯನ್ನು ಕೊರಗ ಭಾಷೆಯಲ್ಲೇ ಮುದ್ರಿಸಲಾಗಿದೆ.
ಇದೀಗ ಈ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಎಲ್ಲೆಡೆಯಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಅರುಣ್ ಜೋಳದ ಕೂಡ್ಲಿಗಿ ಎನ್ನುವವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಆಮಂತ್ರಣವನ್ನು ಹಂಚಿಕೊಂಡಿದ್ದಾರೆ. ಇದೀಗ ಈ ಆಮಂತ್ರಣ ವೈರಲ್ ಆಗಿದ್ದು, ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕೊರಗ ಜನಾಂಗ ಹಾಗೂ ಕೊರಗ ಭಾಷೆ ತುಳುನಾಡಿನಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ಪ್ರಸಕ್ತ ಭಾಷೆ ಅಳಿವಿನಂಚಿನಲ್ಲಿದ್ದು, ಮಾತನಾಡುವವರ ಪ್ರಮಾಣ ಕಡಿಮೆ ಆಗುತ್ತಿದೆ. ಇದರ ನಡುವೆ ಆಮಂತ್ರಣವನ್ನು ಕೊರಗ ಭಾಷೆಯಲ್ಲಿ ಮುದ್ರಿಸಿರುವುದು, ಭಾಷಾ ಬೆಳವಣಿಗೆಗೆ ಪೂರಕ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.
ಕೊರಗ ಭಾಷೆ, ಕನ್ನಡ ಲಿಪಿ: ಕನ್ನಡ ಲಿಪಿಯಲ್ಲಿ ಕೊರಗ ಭಾಷೆಯನ್ನು ಆಮಂತ್ರಣದಲ್ಲಿ ಮುದ್ರಿಸಲಾಗಿದೆ. ಓದುವಾಗ ತುಳುವಿನಂತೆಯೇ ಕಂಡರೂ, ಇದು ಕೊರಗ ಭಾಷೆ. ಈ ಆಮಂತ್ರಣವನ್ನು ಓದಿದ ಹಲವಾರು ಮಂದಿ ಆಶಾವಾದದ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿದ್ದಾರೆ.