ಓ ಹೆನ್ರಿಯ ಜನಪ್ರಿಯ ಕತೆಗಳು ಹುಟ್ಟಿದ್ದು ಸೆರೆಮನೆಯಲ್ಲಿ!

ನಿಮ್ಮ ದೊಡ್ಡ ಪ್ರತಿಭೆಗಳು ಅರಳುವುದು ಸಂಕಷ್ಟದ ದಿನಗಳಲ್ಲಿಯೇ

19ನೆಯ ಶತಮಾನದಲ್ಲಿ ಅಮೆರಿಕದಲ್ಲಿ ಒಬ್ಬ ಸಣ್ಣ ವ್ಯಾಪಾರಿ ಇದ್ದನು. ಯಾವುದೋ ಒಂದು ಮೋಸದ ಪ್ರಕರಣದಲ್ಲಿ ಆತನು ಸೆರೆಮನೆಯನ್ನು ಸೇರುತ್ತಾನೆ. ವಿಚಾರಣೆ ನಿಧಾನವಾಗಿ ಸಾಗುತ್ತದೆ. ಆತನಿಗೆ ಸೆರೆಮನೆಯಲ್ಲಿ ಸಮಯ ಕಳೆಯುವುದು ತುಂಬಾ ಕಷ್ಟ ಆಗುತ್ತದೆ. ತುಂಬಾ ಕ್ರಿಯಾಶೀಲವಾಗಿ ಯೋಚಿಸುವವರಿಗೆ ಉಸಿರು ಕಟ್ಟುವ ಕಾಲ ಅದು. ಆತನು ಸಮಯವನ್ನು ಕಳೆಯಲು ಏನಾದರೂ ಮಾಡಲೇಬೇಕಿತ್ತು.

ಅವನು ಸೆರೆಮನೆಯಲ್ಲಿ ಕತೆ ಬರೆಯಲು ಆರಂಭ ಮಾಡಿದ



































 
 

ಆತ ಜೈಲರನ ವಿಶೇಷ ಅನುಮತಿ ಪಡೆದುಕೊಂಡು ಒಂದಿಷ್ಟು ಪೆನ್ ಮತ್ತು ಪೇಪರ್ ತರಿಸಿಕೊಂಡ. ಸಮಯ ಕಳೆಯಲು ದಿನಕ್ಕೊಂದು ಕತೆಯನ್ನು ಬರೆಯಲು ಆರಂಭ ಮಾಡಿದ. ಸೆರೆಮನೆಯ ಉಸಿರುಕಟ್ಟುವ ವಾತಾವರಣದಲ್ಲಿ ಒಂದಕ್ಕಿಂತ ಒಂದು ಅದ್ಭುತವಾದ ಕತೆಗಳು ಹುಟ್ಟಿಕೊಂಡವು. ಮುಂದೆ ಆರೇಳು ತಿಂಗಳ ನಂತರ ಅವನು ನಿರಪರಾಧಿ ಎಂದು ಕೋರ್ಟು ತೀರ್ಪು ಕೊಟ್ಟು ಬಿಡುಗಡೆ ಮಾಡಿತು.
ಸೆರೆಮನೆಯಿಂದ ಹೊರಬರುವಾಗ ಆತನ ಬಳಿ ಅತ್ಯುತ್ತಮವಾದ ಸಣ್ಣ ಕತೆಗಳು ಇದ್ದವು. ಆತನು ಹಿಂದೆ ತನ್ನ ಜೀವನದಲ್ಲಿ ಯಾವ ಕಥೆಗಳನ್ನು ಬರೆದಿರಲಿಲ್ಲ. ಆ ಕತೆಗಳನ್ನು ಮುಂದೆ ಆತ ಪಬ್ಲಿಷ್ ಮಾಡಿದಾಗ ತುಂಬ ಜನಪ್ರಿಯವಾದವು. ಆತನೂ ಭಾರಿ ಜನಪ್ರಿಯ ಸಣ್ಣ ಕತೆಗಾರ ಆಗುತ್ತಾನೆ. ಆತನೇ ಅಮೆರಿಕಾದ ಅತ್ಯಂತ ಜನಪ್ರಿಯ ಸಣ್ಣ ಕತೆಗಾರ ಓ ಹೆನ್ರಿ!
ನಿಜವಾದ ಹೆಸರು ವಿಲಿಯಂ ಸಿಡ್ನಿ ಪೋರ್ಟರ್, ಪೆನ್ ನೇಮ್ ಓ ಹೆನ್ರಿ

ನಮ್ಮ ಜೀವನದ ಮಹಾ ಪ್ರತಿಭೆಗಳು ಅರಳುವುದು ಅತ್ಯಂತ ಸಂಕಷ್ಟದ ದಿನಗಳಲ್ಲಿ!

ಪ್ರತಿಯೊಬ್ಬ ಸಾಧಕರ ಜೀವನದ ಮಹಾ ಸಾಧನೆಗಳು ಹುಟ್ಟುವುದು ಅವರ ಜೀವನದ ಅತ್ಯಂತ ಸಂಕಷ್ಟದ ದಿನಗಳಲ್ಲಿ ಎನ್ನುವುದಕ್ಕೆ ನನ್ನ ಬಳಿ ನೂರಾರು ನಿದರ್ಶನಗಳು ಇವೆ.

1) ಸ್ವಾತಂತ್ರ್ಯವೀರ ಸಾವರ್ಕರ್ ಅವರು ಅಂಡಮಾನ್ ಸೆರೆಮನೆಯಲ್ಲಿ ಅತ್ಯಂತ ಕಠಿಣವಾದ ಕರಿನೀರಿನ ಶಿಕ್ಷೆಯನ್ನು ಅನುಭವಿಸುತ್ತಾ ಮರಾಠಿಯಲ್ಲಿ ಸಾವಿರಾರು ಸಾಲುಗಳ ಮಹಾಕಾವ್ಯವನ್ನು ಗೋಡೆಯ ಮೇಲೆ ಮೊಳೆಯಿಂದ ಬರೆದರು ಮತ್ತು ಅಷ್ಟನ್ನೂ ನೆನಪಿಟ್ಟುಕೊಂಡರು!

2) ಭಾರತೀಯ ಮೂಲದ, ಈಗ ಅಮೆರಿಕಾದಲ್ಲಿ ವಾಸವಾಗಿರುವ ಸ್ಪರ್ಶ ಷಾ ಎಂಬ ಬಾಲಕನು ಎಲುಬು ಮುರಿಯುವ ವಿಚಿತ್ರವಾದ ಕಾಯಿಲೆಯಿಂದ ಬಳಲುತ್ತಿದ್ದರೂ ವೀಲ್ ಚೇರ್ ಮೇಲೆ ಕುಳಿತು ನೂರಾರು ಅದ್ಭುತವಾದ ಹಾಡುಗಳನ್ನು ಕಂಪೋಸ್ ಮಾಡಿ ಹಾಡಿ ಮ್ಯೂಸಿಕಲ್ ಲೆಜೆಂಡ್ ಆಗಿದ್ದಾನೆ!

3) ಇಂಗ್ಲಿಷ್ ವಿಜ್ಞಾನಿ ಆಗಿದ್ದ ಸ್ಟೀಫನ್ ಹಾಕಿಂಗ್ ತೀವ್ರವಾದ ನರಕೋಶದ ಕಾಯಿಲೆಯಿಂದ ಬಳಲುತ್ತ ವೀಲ್‌ಚೇರ್ ಮೇಲೆ ಒರಗಿಕೊಂಡು ಬಾಹ್ಯಾಕಾಶದ ಅನೂಹ್ಯವಾದ ಕಪ್ಪುರಂಧ್ರ (ಬ್ಲಾಕ್ ಹೋಲ್)ಗಳ ಸಂಶೋಧನೆಯನ್ನು ಪೂರ್ತಿ ಮಾಡಿದ್ದರು!

4) ಕೊರೊನಾ ಸಮಯದಲ್ಲಿ ಎರಡು ವರ್ಷ ಕೂತು ಕತೆ, ಚಿತ್ರಕತೆ ಬರೆದ ಕಾಂತಾರ ಸಿನೆಮಾ ಸೂಪರ್ ಹಿಟ್ ಆಯ್ತು!

5) ತನ್ನ ಜೀವನದ ಕೊನೆಯ ಭಾಗದಲ್ಲಿ ಪಾರ್ಕಿನ್ಸನ್‌ ಹಾಗೂ ಮರೆಗುಳಿತನ ಕಾಯಿಲೆಯಿಂದ ಬಳಲುತ್ತಿದ್ದರೂ ಥಾಮಸ್ ಆಲ್ವಾ ಎಡಿಸನ್ ಅತ್ಯಂತ ಪ್ರಮುಖ ಸಂಶೋಧನೆಗಳನ್ನು ಪೂರ್ಣ ಮಾಡಿದ್ದರು!

ಭರತವಾಕ್ಯ

ಸಂಕಷ್ಟದ ದಿನಗಳು, ದುರದೃಷ್ಟದ ದಿನಗಳು ಎಂದೆಲ್ಲ ಕೊರಗುತ್ತ ಕೂರುವ ಬದಲು ಇನ್ನಷ್ಟು ಹೆಚ್ಚು ಕ್ರಿಯಾಶೀಲವಾಗಿ ಉತ್ಸಾಹದಿಂದ ಕೆಲಸ ಮಾಡುತ್ತ ಹೋದರೆ ಯಶಸ್ಸು ಖಂಡಿತ. ಅಲ್ವಾ? ಏಕೆಂದರೆ ದುರ್ಗಮವಾದ ರಸ್ತೆಗಳು ನಮ್ಮನ್ನು ಅನೂಹ್ಯವಾದ ತಾಣಗಳಿಗೆ ಕರೆದುಕೊಂಡು ಹೋಗುತ್ತವೆ ಎನ್ನುವ ಇಂಗ್ಲಿಷ್ ಗಾದೆಯು ಸುಮ್ಮನೆ ಕ್ರಿಯೇಟ್ ಆದದ್ದು ಅಲ್ಲ.
ರಾಜೇಂದ್ರ ಭಟ್ ಕೆ.
ರಾಷ್ಟ್ರೀಯ ಜೇಸಿ ತರಬೇತಿದಾರರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top