ಧರ್ಮಸ್ಥಳ: 25ನೇ ವರ್ಷದ ಭಜನಾ ತರಬೇತಿ ಕಮ್ಮಟ ಸೆ.28 ರಿಂದ ಅ.4 ರ ವರೆಗೆ ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ.
ಸೆ.28 ಗುರುವಾರ ಬೆಳಿಗ್ಗೆ 11 ಗಂಟೆಗೆ ಮಂಡ್ಯ ಜಿಲ್ಲೆಯ ಆರತಿಪುರದ ಪೂಜ್ಯ ಸಿದ್ಧಾಂತಕೀರ್ತಿ ಸ್ವಾಮೀಜಿ ಭಜನಾ ಕಮ್ಮಟವನ್ನು ಉದ್ಘಾಟಿಸುವರು. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಲಿದ್ದು, ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡುವರು. ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಶುಭಾಶಂಸನೆ ಮಾಡುವರು.
ಅ. 4ರಂದು ನಡೆಯುವ ಸಮಾರೋಪ ಸಮಾರಂಭ ಬೆಳಿಗ್ಗೆ 11 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ಚಲನಚಿತ್ರ ನಿರ್ದೇಶಕ ಇಳೈಯರಾಜ ಭಾಗವಹಿಸುವರು. ಹುಬ್ಬಳ್ಳಿ ಮೂರು ಸಾವಿರ ಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡುವರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು. ಶಾಸಕರುಗಳಾದ ಹರೀಶ್ ಪೂಂಜ, ಕೆ. ಪ್ರತಾಪಸಿಂಹ ನಾಯಕ್ ಮತ್ತು ಕೆ. ಹರೀಶ್ ಕುಮಾರ್ ಶುಭಾಶಂಸನೆ ಮಾಡುವರು.
ಬೆಳಿಗ್ಗೆ ಒಂಭತ್ತು ಗಂಟೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಆಯ್ದ ಭಜನಾ ಮಂಡಳಿಗಳ ಮುನ್ನೂರು ಭಜನಾ ತಂಡಗಳ ಐದು ಸಾವಿರ ಭಜನಾಪಟುಗಳಿಂದ ಶೋಭಾಯಾತ್ರೆ ಹಾಗೂ ನೃತ್ಯ ಭಜನೆ ನಡೆಯಲಿದೆ.
























