ಪುತ್ತೂರು: ದ.ಕ. ಜಿಲ್ಲಾ ಯುವಜನ ಪರಿಷತ್ ಪುತ್ತೂರು ತಾಲೂಕು ಹಾಗೂ ಈದ್ ಮಿಲಾದ್ ಸಮಿತಿ ವತಿಯಿಂದ 31ನೇ ವರ್ಷದ ಬೃಹತ್ ಮಿಲಾದ್ ಸಮಾವೇಶ ಹಾಗೂ ಬುರ್ದಾ ಮಜ್ಲಿಸ್ ಸೆ. 28 ಗುರುವಾರ ಸಂಜೆ 7 ಗಂಟೆಗೆ ನಗರದ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಯುವಜನ ಪರಿಷತ್ ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸಮಾವೇಶದ ಅಂಗವಾಗಿ ಸಂಜೆ 4ಕ್ಕೆ ಕಬಕ ವೃತ್ತದಲ್ಲಿ ಬೃಹತ್ ವಾಹನ ರ್ಯಾಲಿಗೆ ಕಬಕ ಟೈಲರ್ ಇಸ್ಮಾಯಿಲ್ ಸಾಹೇಬ್ ಚಾಲನೆ ನೀಡುವರು. ಈಸ್ಟರ್ನ್ ಗ್ರೂಪ್ ಮಾಲಕ ಜ.ಕಲಂದರ್ ಧ್ವಜ ಸ್ವೀಕಾರ ಮಾಡುವರು. ಬಳಿಕ ರ್ಯಾಲಿ ಹೊರಟು ಪ್ರಮುಖ ರಸ್ತೆಯಾಗಿ ಕಿಲ್ಲೆ ಮೈದಾನದಲ್ಲಿ ಸಮಾಪನಗೊಳ್ಳಲಿದೆ. ರ್ಯಾಲಿಯಲ್ಲಿ ಸುಮಾರು 200ರಿಂದ 300 ವಾಹನ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು
ಸಂಜೆ ಕಿಲ್ಲೆ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಬಹು.ಅಸ್ಸಯ್ಯದ್ ಅಹ್ಮದ್ ಪೊಕೋಯ ತಂಙಳ್ ದುವಾಶೀರ್ವಚನ ಮಾಡುವರು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ ಅಧ್ಯಕ್ಷತೆ ವಹಿಸುವರು. ಬಹು ಎಂ.ಎಂ. ಮಹ್ ರೂಫ್ ಸುಲ್ತಾನಿ ಅಲ್ ಪುರ್ಖಾನಿ ಆತೂರು ಉದ್ಘಾಟಿಸುವರು. ಬಹು.ಆಶಿಕ್ ದಾರಿಮಿ ಅಲಂಪುಝ ಪ್ರಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಪಿ.ಮಹಮ್ಮದ್ ಹಾಜಿ, ಉದ್ಯಮಿ ರಿಯಾಝ್ ಸಹಿತ ಹಲವಾರು ಧಾರ್ಮಿ ಮುಖಂಡರು, ಉದ್ಯಮಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಬಹು.ಆರಿಫ್ ಸಅದಿ ಭಟ್ಕಳ ಮತ್ತು ತಂಡದಿಂದ ಬೃಹತ್ ಬುರ್ದಾ ಮಜ್ಲಿಸ್ ನಡೆಯಲಿದೆ. ಬಹು. ಫಕ್ರೆ ಆಲಂ ಮುಂಬೈಯವರಿಂದ ನಾತೇ ಶರೀಫ್ ನಡೆಯಲಿದೆ. ಕಾರ್ಯಕ್ರಮದ ಬಳಿಕ ರಾತ್ರಿ ಅನ್ನದಾನವಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಈದ್ ಮಿಲಾದ್ ಸಮಿತಿ ಅಧ್ಯಕ್ಷ ಬಶೀರ್ ಪರ್ಲಡ್ಕ, ಪ್ರಧಾನ ಕಾರ್ಯದರ್ಶಿ ಇಫಾಝ್ ಬನ್ನೂರು, ಮುಸ್ಲಿಂ ಯುವಜನ ಪರಿಷತ್ ಕೋಶಾಧಿಕಾರಿ, ನ್ಯಾಯವಾದಿ ಶಾಕಿರ್ ಹಾಜಿ, ನೌಷದ್ ಹಾಜಿ ಬೊಳ್ವಾರ್, ಹಸೈನಾರ್ ಬನಾರಿ, ಅಶ್ರಫ್ ಬಾವ ಉಪಸ್ಥಿತರಿದ್ದರು.