ಪುತ್ತೂರು: ಹಿಂದಿ ಭಾಷೆ ಕೇವಲ ರಾಷ್ಟ್ರೀಯ ಭಾಷೆಯಷ್ಟೇ ಅಲ್ಲದೆ ಏಕತೆಯ ಸಂಕೇತವೂ ಹೌದು. ಯಾವುದೇ ಭಾಷೆಯ ಬಗೆಗಿನ ದ್ವೇಷ ಒಳಿತಲ್ಲ. ಅದರಿಂದ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಂದು ಭಾಷೆಯನ್ನೂ ಗೌರವಿಸಬೇಕು ಎಂದು ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಹಿಂದಿ ಉಪನ್ಯಾಸಕಿ ಪುಷ್ಪಲತಾ ಹೇಳಿದರು.
ಅವರು ಬಪ್ಪಳಿಗೆ ಅಂಬಿಕಾ ಸಿಬಿಎಸ್ಇ ವಿದ್ಯಾಲಯದಲ್ಲಿ ನಡೆದ ಅಂತರಾಷ್ಟ್ರೀಯ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವಾಡುವ ಮಾತು ಯಾವಾಗಲೂ ನಮ್ಮ ಹೃದಯದಿಂದ ಬರಬೇಕು. ಹಾಗಿದ್ದಾಗ ಮಾತ್ರ ಎಲ್ಲರೂ ನಮ್ಮ ಮಾತುಗಳನ್ನು ಇಷ್ಟಪಡುತ್ತಾರೆ. ನಾವು ಯಾವಾಗ ಭಾವನಾತ್ಮಕವಾಗಿ, ಪ್ರೀತಿಯಿಂದ ಮಾತನಾಡುವುದಿಲ್ಲವೋ ಆಗ ಯಾರೂ ಕೂಡ ನಮ್ಮ ವ್ಯಕ್ತಿತ್ವವನ್ನು ಇಷ್ಪಪಡಲಾರರು. ಹೆಚ್ಚು ಭಾಷೆಯನ್ನು ಕಲಿಯುವ ಸಾಧ್ಯತೆ ಎಳೆಯ ವಯಸ್ಸಿನಲ್ಲಿ ಹೆಚ್ಚಿರುವುದರಿಂದ ಸಾಕಷ್ಟು ಭಾಷೆಗಳನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಂಶುಪಾಲೆ ಮಾಲತಿ ಡಿ. ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತನ್ವಿ ಎ. ರೈ ಸ್ವಾಗತಿಸಿ, ವಿದ್ಯಾರ್ಥಿನಿ ವಂಶಿಕ ವಂದಿಸಿದರು. ವಿದ್ಯಾರ್ಥಿನಿ ಶ್ರೀಲಕ್ಷ್ಮಿ ನಿರೂಪಿಸಿದರು. ಹಿಂದಿ ದಿವಸದ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಪ್ರಮಾಣ ಪತ್ರ ನೀಡಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.