ಬೆಳ್ತಂಗಡಿ: ದೂರು ನೀಡಿದ ಎರಡೇ ದಿನದಲ್ಲಿ ಮನೆಯ ನೆಲಮಾಳಿಗೆಯಿಂದ ಕಳವಾಗಿದ್ದ ಚಿನ್ನಾಭರಣವನ್ನು ಮನೆಯಂಗಳದಲ್ಲಿ ಇಟ್ಟುಹೋದ ಘಟನೆ ಮುಂಡಾಜೆ ಗ್ರಾಮದ ಕಡಂಬಳ್ಳಿ ವಾಳ್ಯದಲ್ಲಿ ನಡೆದಿದೆ.
ಸುಮಾರು 5 ಲಕ್ಷ ರೂ. ಮೌಲ್ಯದ 122 ಗ್ರಾಂ ಚಿನ್ನಾಭರಣ ಮನೆಯಿಂದ ಕಳವಾದ ಬಗ್ಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಈ ನಡುವೆ ಪ್ರಮೋದ್ ವಿ. ಭಿಡೆ ಅವರ ಮನೆಯಂಗಳದಲ್ಲಿ ಚಿನ್ನಾಭರಣ ಪತ್ತೆಯಾಗಿದೆ.
ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಹಾಗೂ ತಂಡದವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಳವಾದ ಚಿನ್ನಾಭರಣ:
ಪ್ರಮೋದ ವಿ. ಭಿಡೆ ಅವರು ತಮ್ಮ ಮನೆಯ ಸಾರಣೆ ಹಾಗೂ ಪೈಂಟಿಂಗ್ ಕೆಲಸವನ್ನು ಕಾರ್ಮಿಕರ ಮೂಲಕ ಜು. 5ರಂದು ಆರಂಭಿಸಿದ್ದು, ಇದಕ್ಕೆ ಮೊದಲು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಅವರ ಪತ್ನಿ ಮನೆಯ ನೆಲಮಾಳಿಗೆಯಲ್ಲಿ ಕೋಣೆಗೆ ಬೀಗ ಹಾಕದೆ ಇರಿಸಿದ್ದರು. 10ರಿಂದ 13 ಮಂದಿ ಕಾರ್ಮಿಕರು ಜು. 19ರಂದು ಕಾಮಗಾರಿ ಮುಗಿಸಿ ತೆರಳಿದ್ದರು.
ಸೆ. 12ರಂದು ಕಾರ್ಯಕ್ರಮಕ್ಕೆ ತೆರಳುವ ವೇಳೆ ಆಭರಣ ಧರಿಸಲು ಆಭರಣ ಇರಿಸಲಾಗಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ ಸುಮಾರು 5 ಲಕ್ಷ ರೂ. ಮೌಲ್ಯದ 122 ಗ್ರಾಂ. ಚಿನ್ನಾಭರಣ ಕಳವಾಗಿರುವ ಘಟನೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.