ಪುತ್ತೂರು: ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಭ್ರಷ್ಟರ ಕೂಟದ ಸರಕಾರವಾಗಿದ್ದು, ಸರಕಾರದ ಭ್ರಷ್ಟಾಚಾರದ ಬಗ್ಗೆ ದೂರು ನೀಡಿದವರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಗುರುವಾರ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಸರಕಾರದ ವಿರುದ್ಧ ಬರೆದ ಮಾಧ್ಯಮಗಳು, ಸಾಮಾಜಿಕ ಜಾಲತಾಣದ ಮೇಲೂ ದಬ್ಬಾಳಿಕೆ ನಡೆಸುತ್ತಿದೆ. ಭ್ರಷ್ಟಾಚಾರದ ಒಂದು ಭಾಗವಾಗಿ ಪರಿಶಿಷ್ಟ ಜಾತಿ, ಪಂಗಡದವರ ಜಾಗ ಕಬಳಿಸಿದ ಸಚಿವ ಸುಧಾಕರ್ ಅವರನ್ನು ರಕ್ಷಿಸುವ ಕೆಲಸ ಸರಕಾರದಿಂದ ನಡೆಯುತ್ತಿದೆ. ಮುಖ್ಯಮಂತ್ರಿಗಳಿಗೆ ಮಾನ ಮರ್ಯಾದೆ ಇದ್ದರೆ ಸಚಿವರ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಸಚಿವರ ವಿರುದ್ಧ ದೂರು ಬಂದಾಗ ರಾಜೀನಾಮೆ ಕೊಡಿಸಿದ್ದೇವೆ. ಆದರೆ ಈಗಿನ ಸರಕಾರದ ಎಲ್ಲಾ ಮಂತ್ರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪವಿದೆ. ಚೆಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳೇ ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಕೇವಲ ಮೂರು ತಿಂಗಳಲ್ಲಿ 275 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸರಕಾರ ಕಣ್ಣುಮುಚ್ಚಿ ಕುಳಿತಿದೆ. ಬರಗಾಲ ಘೋಷಣೆ ಮಾಡಲೂ ಮೀನಮೇಷ ಎಣಿಸುತ್ತಿದೆ. ಕೇವಲ 164 ತಾಲೂಕಿನಲ್ಲಿ ಬರ ಘೋಷಣೆ ಮಾಡಿದೆ. ಇಡೀ ರಾಜ್ಯದಲ್ಲಿ ಬರದ ಸ್ಥಿತಿ ಇದೆ. ಇಡೀ ರಾಜ್ಯದಲ್ಲಿ ಬರ ಘೋಷಣೆ ಮಾಡಬೇಕು. ಮಲೆನಾಡು, ಕರಾವಳಿ ಭಾರೀ ಮಳೆಯಾಗುವ ಪ್ರದೇಶಗಳು. ಆದರೆ ಈ ಬಾರಿ ಈ ಭಾಗದಲ್ಲೂ ಮಳೆಯಿಲ್ಲ. ನದಿಗಳೆಲ್ಲಾ ಬತ್ತಿ ಹೋಗುತ್ತಿದವೆ. ಇಡೀ ರಾಜ್ಯಕ್ಕೆ ಬರ ಘೋಷಣೆ ಮಾಡಬೇಕೆಂದು ಎಂದು ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ.