ಸೌಜನ್ಯ ಕುಟುಂಬಕ್ಕೆ ಇನ್ನೂ ನ್ಯಾಯ ಸಿಗದಿರುವುದು ದುರಾದೃಷ್ಟಕರ | ಸೌಜನ್ಯ ನೈಜ ಆರೋಪಿಗಳನ್ನು  ಪತ್ತೆಹಚ್ಚುವಂತೆ ಎಬಿವಿಪಿ ವತಿಯಿಂದ ಪ್ರತಿಭಟನೆ |

ಪುತ್ತೂರು : ಸೌಜನ್ಯ ನೈಜ ಆರೋಪಿಗಳನ್ನು ಪತ್ತೆಮಾಡಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ಘಟನೆಯನ್ನು ದಾಳವಾಗಿ ಉಪಯೋಗಿಸಿ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಧಕ್ಕೆ ತರುವಂತಹ ಪ್ರಕರಣಗಳನ್ನು ತಕ್ಷಣ ಹತ್ತಿಕ್ಕಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಾಲೂಕು ಆಡಳಿತ ಸೌಧದ ಬಳಿ ಇರುವ ಅಮರ್ ಜವಾನ್ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಎಬಿವಿಪಿ ಸಹ ಕಾರ್ಯದರ್ಶಿ ಹರ್ಷಿತ್ ಕೊಯಿಲ ಮಾತನಾಡಿ, ಸೌಜನ್ಯ ಹತ್ಯೆಗಾಗಿ 11 ವರ್ಷಗಳಾಗಿದ್ದು ಇನ್ನೂ ನ್ಯಾಯ ಸಿಗದಿರುವುದು ದುರಾದೃಷ್ಟಕರ, ನಿಜವಾದ ಆರೋಪಿಗಳನ್ನು ಬಂಧಿಸುವ ಪ್ರಯತ್ನ ಆಗಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಬಳಿಕದ ದಿನಗಳಲ್ಲಿ ಬಂಧನವಾಗಿದ್ದ ಸಂತೋಷ್ ರಾವ್ ನಿರಪರಾಧಿ ಎಂದು ಸಾಬೀತಾದ ಬಳಿಕ ಪ್ರಕರಣವನ್ನು ಮರು ತನಿಖೆಗೆ ಒತ್ತಾಯಿಸಿ ಪ್ರತಿಭಟನೆಗಳು ಕಾವು ಪಡೆದುಕೊಂಡಿದೆ. ನೈಜ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಎಬಿವಿಪಿ ಪ್ರತೀ ಶಾಖೆಗಳಲ್ಲೂ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದ ಅವರು, ಈ ಘಟನೆಯನ್ನು ದಾಳವಾಗಿ ಉಪಯೋಗಿಸಿ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಘಟನೆತೆ ಮತ್ತು ಸಾಮಾನ್ಯ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಹತ್ತಿಕ್ಕಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಕಾರ್ಯಕರ್ತೆ ಸ್ವರ್ಣ ಗೌರಿ ಮಾತನಾಡಿದರು. ಸಂಘಟನೆಯ ಸ್ವಸ್ತಿಕ್ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಸಂಚಾಲಕ ತೇಜಸ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ತಹಸೀಲ್ದಾರ್ ಮೂಲಕ ರಾಜ್ಯ ಗೃಹ ಮಂತ್ರಿಗಳಿಗೆ ಮನವಿ ಮಾಡಲಾಯಿತು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top