ಪುತ್ತೂರು : ಅಲ್ಪಸಂಖ್ಯಾತ ಮಕ್ಕಳು ವಿದ್ಯೆ ಕಲಿಯಬಾರದು, ಅವರು ವಿದ್ಯೆಯಿಂದ ವಂಚಿತರಾಗಬೇಕು ಎಂಬ ಏಕೈಕ ಉದ್ದೇಶದಿಂದ ಕಳೆದ ಅವಧಿಯ ಬಿಜೆಪಿ ಸರಕಾರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ನೀಡುತ್ತಿದ್ದ ಸ್ಕಾಲರ್ ಶಿಪ್ ರದ್ದು ಮಾಡಿದ್ದರು ಆ ಮೂಲಕ ವಿದ್ಯೆಯ ಹೆಸರಿನಲ್ಲೂ ಕೋಮುವಾದ ಮಾಡಿದ್ದರು ಎಂದು ರಾಜ್ಯ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಹೇಳಿದರು.
ಅವರು ಇಡ್ಕಿದು ಗ್ರಾಮದ ಮಿತ್ತೂರು ದಾರುಲ್ ಇರ್ಷಾದ್ ಸಂಸ್ಥೆಯಲ್ಲಿ ಪ್ರಧಾನಮಂತ್ರಿ ಜನವಿಕಾಶ ಯೋಜನೆಯಡಿ ನಿರ್ಮಿಸಲಾದ ಪ್ರೌಢ ಶಾಲಾ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ನಾವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ವಿದ್ಯೆ ಇಲ್ಲದೇ ಇದ್ದರೆ ಮುಂದೆ ಏನೂ ಮಾಡಲು ಸಾಧ್ಯವಿಲ್ಲ. ಶಿಕ್ಷಣಕ್ಕಾಗಿ ನಾವು ಒಗ್ಗೂಡಬೇಕು, ಯಾವುದೇ ಒಂದು ಮಗು ಶಿಕ್ಷಣದಿಂದ ವಂಚಿತರಾಗಬಾರದು ಆ ರೀತಿ ಆಗದಂತೆ ಎಚ್ಚರಿಕೆಯಿಂದ ಇರಬೇಕಾದದ್ದು ಪೋಷಕರ ಜವಾಬ್ದಾರಿಯಾಗಿದೆ ಎಂದು ಸಚಿವರು ಹೇಳಿದರು.
ಪುತ್ತೂರು ಶಾಸಕ ಅಶೋಕ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಮಾಜಿ ಸಚಿವ ಬಿ ರಮಾನಾಥ ರೈ, ಮಾಜಿ ಜಿಪಂ ಸದಸ್ಯ ಎಂ ಎಸ್ ಮಹಮ್ಮದ್ , ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ನಂದನ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ. ಜಿಪಂ ಸಿಇಒ ಆನಂದ, ಟಿಎಂ ಶಹೀದ್ ಸುಳ್ಯ, ವಕಫ್ ಬೋರ್ಡು ಮಾಜಿ ಅಧ್ಯಕ್ಷ ಶಾಪಿ ಮುಸ್ಲಿಯಾರ್ ಸಅದಿ, ಮಾಣಿ ಉಸ್ತಾದ್ ಸಹಿತ ಅನೇಕ ಗಣ್ಯರು ಉಪಸ್ತಿತರಿದ್ದರು.