ಟ್ಯೂಷನ್ ಮುಗಿಸಿ ವಾಪಸಾಗುತ್ತಿದ್ದ ಮಕ್ಕಳಿಗೆ ಡಿಕ್ಕಿ ಹೊಡೆದ ವಾಹನ
ಬೆಂಗಳೂರು: ಟ್ಯೂಷನ್ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಮಕ್ಕಳ ಮೇಲೆ ಗೂಡ್ಸ್ ವಾಹನ ಹರಿದು ಇಬ್ಬರು ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆ ನಿನ್ನೆ ರಾತ್ರಿ ರಾಮನಗರದಲ್ಲಿ ಸಂಭವಿಸಿದೆ.
ರಾಮನಗರ ತಾಲ್ಲೂಕಿನ ಮಾಗಡಿ ರಸ್ತೆಯ ಗೊಲ್ಲರದೊಡ್ಡಿ ಗ್ರಾಮದಲ್ಲಿ ಬುಧವಾರ ರಾತ್ರಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ಐವರು ಮಕ್ಕಳ ಮೇಲೆ ಟಾಟಾ ಏಸ್ ಗೂಡ್ಸ್ ವಾಹನ ಹರಿದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. 7 ಮಂದಿಗೆ ಗಂಭೀರ ಗಾಯಗಳಾಗಿವೆ. 12 ವರ್ಷದ 9 ಮಕ್ಕಳ ಮೇಲೆ ವಾಹನ ಹರಿದಿದ್ದು, ಗಾಯಾಳು ಮಕ್ಕಳನ್ನು ರಾಮನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ರೋಹಿನ್ (5) ಮತ್ತು ಶಾಲಿನಿ (8) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಸುಚಿತ್, ಗೌತಮಿ ಹಾಗೂ ಲೇಖನಾಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಗೊಲ್ಲರದೊಡ್ಡಿ ಗ್ರಾಮದ ಮನೆಯೊಂದರಲ್ಲಿ ರಾತ್ರಿ 8ರ ಸುಮಾರಿಗೆ ಟ್ಯೂಷನ್ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ಮಕ್ಕಳು ರಸ್ತೆ ದಾಟುತ್ತಿದ್ದಾಗ, ಮಾಗಡಿ ಕಡೆಯಿಂದ ವೇಗವಾಗಿ ಬಂದ ಗೂಡ್ಸ್ ವಾಹನ ಮಕ್ಕಳ ಮೇಲೆ ಹರಿದಿದೆ. ಈ ವೇಳೆ ಗೂಡ್ಸ್ ಗಾಡಿ ಮಕ್ಕಳ ಮೇಲೆ ಉರುಳಿ ಮಕ್ಕಳಿಗೆ ಗಂಭೀರ ಗಾಯವಾಗಿದೆ. ಸ್ಥಳೀಯರು ಮಕ್ಕಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ರೋಹಿನ್ ಮತ್ತು ಶಾಲಿನಿ ಬದುಕುಳಿಯಲಿಲ್ಲ. ಘಟನೆ ಬಳಿಕ, ಚಾಲಕ ಸ್ವಲ್ಪ ದೂರದಲ್ಲಿ ಗೂಡ್ಸ್ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ.